

ಹಾಸನ: ಜಿಲ್ಲೆಯಲ್ಲಿ ನಿನ್ನೆ(ಫೆ.25) ತಡರಾತ್ರಿ ರಸ್ತೆ ಬಳಿ ನಿಂತಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಭೀಕರ ಘಟನೆ ಚನ್ನರಾಯಪಟ್ಟಣ ತಾಲೂಕಿನ ಕಾರೆಹಳ್ಳಿ ಬಳಿ ನಡೆದಿದೆ(Hassan Road Accident). ಬೈಕ್ನಲ್ಲಿದ್ದ ಲೋಕೇಶ್ ಆಚಾರಿ, ಲಕ್ಷ್ಮೀ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಲೋಕೇಶ್ ಆಚಾರಿ ತಮ್ಮ ಪತ್ನಿ ಹಾಗೂ ಮಕ್ಕಳನ್ನು ಬೈಕ್ನಲ್ಲಿ ತಡ ರಾತ್ರಿ ಕರೆದುಕೊಂಡು ಹೋಗುವಾಗ ನುಗ್ಗೇಹಳ್ಳಿ-ತಿಪಟೂರು ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ನುಗ್ಗೇಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಡೆದಿದ್ದೇನು..?: ಲೋಕೇಶ್ ಅವರು ಹೊಸೂರಿನಿಂದ ಪತ್ನಿಯನ್ನು ಕರೆದುಕೊಂಡು ನವಿಲೆ ಗ್ರಾಮಕ್ಕೆ ಹೋಗುತ್ತಿದ್ದರು. ಈ ವೇಳೆ ಲೋಕೇಶ್ ಬೈಕ್ ಕಾರೇಹಳ್ಳಿ ಬಳಿ ರಸ್ತೆ ಬದಿ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯೊಡೆದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ.
