

ಬೆಂಗಳೂರು: ಹಲವು ವರ್ಷಗಳ ಹಿಂದೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದ ಪ್ರಕರಣ ಸಂಬಂಧ ಆರೋಪಿಯೊಬ್ಬನಿಗೆ ವಿಧಿಸಿದ ಶಿಕ್ಷೆ ಪ್ರಮಾಣವನ್ನು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಿ ವಿಭಿನ್ನವಾದ ಒಂದು ಶಿಕ್ಷೆಯನ್ನು ನೀಡಿ ಕರ್ನಾಟಕ ಹೈಕೋರ್ಟ್ (Karnataka High Court) ಆದೇಶ ಹೊರಡಿಸಿದೆ. ಹೌದು, 2008ರಲ್ಲಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದ ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಆರೋಪಿ ಐತಪ್ಪ ನಾಯ್ಕ (81)ಗೆ ಜಿಲ್ಲಾ ಕೋರ್ಟ್ ವಿಧಿಸಿದ್ದ 2 ವರ್ಷಗಳ ಶಿಕ್ಷೆಯನ್ನು ಮೂರು ದಿನಕ್ಕೆ ಇಳಿಕೆ ಮಾಡಿ ಒಂದು ವರ್ಷ ಅಂಗನವಾಡಿಯಲ್ಲಿ ಉಚಿತವಾಗಿ ಸೇವೆ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ವೃದ್ಧ ಐತಪ್ಪ ನಾಯ್ಕ 2008ರಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದರು. ಈ ಪ್ರಕರಣ ಸಂಬಂಧ ಆರೋಪಿ ಐತಪ್ಪನನ್ನು ಪೊಲೀಸರು ಬಂಧಿಸಿದ್ದರು. ಅದರಂತೆ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯವರು ಆರೋಪಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಆದರೆ ಮಕ್ಕಳಿಲ್ಲದ ವೃದ್ಧ ಐತಪ್ಪ ನಾಯ್ಕ ತನ್ನ ಪತ್ನಿಯನ್ನು ನೋಡಿಕೊಳ್ಳಬೇಕಿರುವುದರಿಂದ ಶಿಕ್ಷೆ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಾದ ಆಲಿಸಿದ ಏಕಸದಸ್ಯ ಪೀಠ, ಆರೋಪಿ ಐತಪ್ಪ ನಾಯ್ಕಗೆ ಜಿಲ್ಲಾ ನ್ಯಾಯಾಲಯ ವಿಧಿಸಿದ್ದ ಎರಡು ವರ್ಷಗಳ ಶಿಕ್ಷೆಯನ್ನು ಮೂರು ದಿನಗಳಿಗೆ ಇಳಿಕೆ ಮಾಡಿತು. ಅಲ್ಲದೆ, 2023ರ ಫೆ.20ರಿಂದ ಮಿತನಡ್ಕ ಅಂಗನವಾಡಿಯಲ್ಲಿ ಒಂದು ವರ್ಷ ಉಚಿತವಾಗಿ ಸೇವೆ ಸಲ್ಲಿಸಬೇಕು ಎಂದು ಆದೇಶ ಹೊರಡಿಸಿತು.