

ಚಿಕ್ಕಮಗಳೂರು: ದತ್ತಪೀಠದ (Dattapeeta) ಆಡಳಿತಕ್ಕಾಗಿ ರಚಿಸಿದ ವ್ಯವಸ್ಥಾಪನಾ ಸಮಿತಿ ಅವೈಜ್ಞಾನಿಕವಾಗಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿರುವ ಮುಸ್ಲಿಮರು (Muslims) ಇದೇ ಮಾರ್ಚ್ 8,9 ಮತ್ತು 10 ರಂದು ನಡೆಯಲಿರುವ ಉರೂಸ್ನಲ್ಲಿ (Urus) ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತ ಉರುಸ್ ಮಾಡುವಂತಿಲ್ಲ. ನಮ್ಮ ಸಮುದಾಯದ ಪ್ರಕಾರ ಉರುಸ್ ನಡೆಯಬೇಕು. ಇಡೀ ಮುಸ್ಲಿಂ ಸಮುದಾಯ ಒಪ್ಪುವಂತೆ ಉರುಸ್ ಮಾಡ್ತೀರಾ ಎಂದು ಜಿಲ್ಲಾಡಳಿತಕ್ಕೆ ಬಾಬಾಬುಡನ್ ಗಿರಿ (Bababudangiri) ಅಧ್ಯಕ್ಷ ಸಿರಾಜ್ ಪ್ರಶ್ನಿಸಿದ್ದಾರೆ.

ನಮ್ಮ ಧಾರ್ಮಿಕ ಗುರುಗಳ ನೇತೃತ್ವದಲ್ಲಿ ಉರುಸ್ ನಡೆಯಬೇಕು. ದತ್ತಜಯಂತಿಗೆ ನಾವು ಯಾವುದೇ ವಿರೋಧ ಮಾಡಿಲ್ಲ. ಹೀಗಾಗಿ ನಮ್ಮ ಕಾರ್ಯಕ್ರಮಕ್ಕೂ ಅವಕಾಶ ನೀಡಬೇಕು. ದರ್ಗಾ ಪಕ್ಕ ಮಸೀದಿ ಇದ್ದು ನಮ್ಮ ಕಾರ್ಯಕ್ರಮಕ್ಕೆ ಅದನ್ನು ತೆರೆಯಿರಿ. ನಮಾಜ್ ಮಾಡಿ ನಾವು ಪೂಜೆಗೆ ಹೋಗುತ್ತೇವೆ. ಫಾತಿಹಾ ಮಾಡಬೇಕು, ಗೋರಿಗಳ ಮೇಲೆ ಬಟ್ಟೆ ಹಾಕುವುದಕ್ಕೆ ಬಿಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ದತ್ತಪೀಠದ ಆಡಳಿತಕ್ಕೆ ಸರ್ಕಾರ ರಚಿಸಿದ ಸಮನ್ವಯ ಸಮಿತಿಯಲ್ಲಿರುವ ಎಂಟು ಜನರಲ್ಲಿ ಏಳು ಜನ ಹಿಂದೂಗಳು. ಮುಸ್ಲಿಂ ಸದಸ್ಯನಾಗಿರುವ ಬಾಷಾ ಮುಸ್ಲಿಮನೇ ಅಲ್ಲ. 2004ರಲ್ಲಿ ಆತ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ. ಅವನನ್ನು ನಮ್ಮ ಸಮುದಾಯ ಮುಸ್ಲಿಂ ಎಂದು ಒಪ್ಪಿಲ್ಲ. ಸರ್ಕಾರ ಭಾವೈಕ್ಯತೆಗೆ ನ್ಯಾಯ ಒದಗಿಸಬೇಕು ಅಂದರೆ ಆ ಸಮಿತಿಯಲ್ಲಿ ನಾಲ್ಕು ಹಿಂದೂ, ನಾಲ್ಕು ಮುಸ್ಲಿಮರು ಇರಬೇಕು ಎಂದು ಆಗ್ರಹಿಸಿದ್ದಾರೆ.

ಬಾಷಾ ಬಿಜೆಪಿಯ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾನೆ. ದತ್ತಪೀಠದಲ್ಲಿ ಮುಸ್ಲಿಮರ ಒಂದೊಂದು ಆಚರಣೆಗಳನ್ನು ಮೊಟಕುಗೊಳಿಸುವ ಕೆಲಸ ನಡೆಯುತ್ತಿದೆ. ಬುಡನ್ ಬುಡನ್ ದರ್ಗಾದಲ್ಲಿ ಮೌಲಾನಾಗೆ ನಮಾಜ್ ಮಾಡಲು, ಅಜಾನ್ ಮಾಡಲು ಅವಕಾಶ ನೀಡುತಿಲ್ಲ. ಸರ್ಕಾರ ದತ್ತಜಯಂತಿಯಂತೆ ನಮಗೂ ನಮ್ಮ ಧಾರ್ಮಿಕ ಪದ್ಧತಿಯಂತೆ ಉರುಸ್ ನಡೆಸಲು ಅವಕಾಶ ನೀಡಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.