

ತುಮಕೂರು: ದ್ವೇಷ ಭಾಷಣ ಆರೋಪದಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್ ವೆಲ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತುಮಕೂರು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ. ಜಾಮೀನು ನೀಡಿದರೆ ಸಾರ್ವಜನಿಕ ಶಾಂತಿಯನ್ನು ಹಾಳು ಮಾಡಲು ಪಂಪ್‌ವೆಲ್ ಸಾರ್ವಜನಿಕವಾಗಿ ಮತ್ತೆ ಭಾಷಣ ಮಾಡುವ ಸಾಧ್ಯತೆಗಳಿವೆ” ಎಂದು ಅಭಿಪ್ರಾಯಪಟ್ಟಿದೆ.

ಜನವರಿ 28ರಂದು ನಗರದ ಟೌನ್ ಹಾಲ್ ನಲ್ಲಿ ನಡೆದ ಸಂಘ ಪರಿವಾರದ ಶೌರ್ಯ ಕಾರ್ಯಕ್ರಮದಲ್ಲಿ ಶರಣ್ ಪಂಪ್‌ವೆಲ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದರ ವಿರುದ್ಧ ಸೈಯದ್ ಬುರ್ಹಾನುದ್ದೀನ್ ಎಂಬವರು ತುಮಕೂರು ನಗರ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಶರಣ್ ವಿರುದ್ಧ ಜನವರಿ 30ರಂದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 295 ಎ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಫೆ.14ರಂದು ಶರಣ್ ಪಂಪ್‌ವೆಲ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಗೆ ತೆಗೆದುಕೊಂಡ ನ್ಯಾಯಾಲಯವು ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿದೆ. ಇನ್ನು ಪ್ರಕರಣದ ಗಂಭೀರತೆಯನ್ನು ನಿರ್ಧರಿಸುವುದು ಪೊಲೀಸರೇ ಎಂದು ಹೇಳಿದೆ.