

ಬೆಂಗಳೂರು (ಫೆ.19): ಐಪಿಎಸ್ ಅಧಿಕಾರಿ (ಐಜಿಪಿ) ಡಿ. ರೂಪಾ ಮೌದ್ಗಿಲ್ ಅವರು ಬೆಳಗ್ಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನು ಹಂಚಿಕೊಂಡು ವೈರಲ್ ಮಾಡುತ್ತಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ರೋಹಿಣಿ ಸಿಂಧೂರಿ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ.

ಫೋಟೋ ಹಂಚಿಕೆ ಮಾಡಿರುವುದು ಆಧಾರಹರಿತ ಆರೋಪವಾಗಿದೆ. ನನ್ನ ತೇಜೋವಧೆ ಮಾಡುತ್ತಿದ್ದಾರೆ. ರೂಪಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ನನ್ನ ವಿರುದ್ಧ ಸುಳ್ಳು, ವೈಯಕ್ತಿಕ ನಿಂದನೆ ಮಾಡುತ್ತಿದ್ದಾರೆ. ಯಾವಾಗಲೂ ಸುದ್ದಿಯಲ್ಲಿರಬೇಕೆಂದು ಅವರು ಬಯಸುತ್ತಾರೆ. ಹೀಗಾಗಿ, ಈ ರೀತಿ ಮಾಡುತ್ತಿದ್ದಾರೆ. ಅವರು ಮಾನಸಿಕ ಸ್ಥಿಮಿತ ಕಳೆದುಕೊಮಡಿದ್ದು, ಮಾನಸಿಕ ರೋಗಕ್ಕೆ ಚಿಕತ್ಸೆ ಪಡೆದುಕೊಳ್ಳಬೇಕು. ಈಗ ತೇಜೋಧೆ ಮಾಡಲು ಮುಂದಾಗಿರುವ ರೂಪಾ ಅವರ ವಿರುದ್ಧ ನಾನು ಕಾನೂನಾತ್ಮಕ ಹೋರಾಟ ಮಾಡುತ್ತೇನೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಫೋಟೋಗಳನ್ನು ಕಳುಹಿಸಿ ಅಪಪ್ರಚಾರ: ನನ್ನ ಫೋಟೋಗಳನ್ನು ಸಾಮಾಜಿ ಮಾಧ್ಯಮಗಳಲ್ಲಿ ಹಂಚಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾರಿಗೆ ಫೋಟೋಗಳನ್ನು ಕಳುಹಿಸಿದ್ದೇನೆ ಎಂಬುದನ್ನು ಬಹಿರಂಗಪಡಿಸಲಿ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಬೇಕಾಬಿಟ್ಟಿಯಾಗಿ ಪೋಸ್ಟ್ ಮಾಡುತ್ತಿದ್ದಾರೆ. ಅವರು ಮಾಧ್ಯಮಗಳು ಹಾಗೂ ರಾಜ್ಯದ ಜನರ ಗಮನ ಸೆಳೆಯಲು ಈ ರೀತಿ ಫೋಟೋಗಳನ್ನು ಹಂಚಿಕೊಂಡು ವಿವಾದ ಸೃಷ್ಟಿಸುತ್ತಿದ್ದಾರೆ. ರೂಪಾ ಅವರಿಗೆ ಇದೊಂದು ಅಭ್ಯಾಸವಾಗಿ ಬಿಟ್ಟಿದೆ. ಅವರು ದ್ವೇಷ ಸಾಧಿಸಲು ಹೊರಟಿರುವುದು ಸಮಾಜಕ್ಕೆ ದೊಡ್ಡ ಅಪಾಯಕಾರಿ ಆಗಿದೆ ಎಂದು ಹೇಳಿದರು.
ತನಿಖೆ ಆಗಬೇಕು ಎಂದು ಆಗ್ರಹಿಸಿದ್ದ ರೂಪಾ ಮೌದ್ಗಿಲ್: ರೋಹಿಣಿ ಸಿಂಧೂರಿ ವಿರುದ್ಧ ಬೆಳಗ್ಗೆ 19 ಆರೋಪಗಳ ಪಟ್ಟಿ ಪೋಸ್ಟ್ ಮಾಡಿದ್ದ ರೂಪ ಅವರು ಈಗ ರೋಹಿಣಿ ಸಿಂಧೂರಿ ಅವರ ಕೆಲವು ಖಾಸಗಿ ಫೋಟೋಗಳನ್ನು ಹಂಚಿಕೊಂಡು ಇದರ ಅರ್ಥ ಏನಿರಬಹುದು ಎಂದು ಪ್ರಶ್ನೆ ಕೇಳಿದ್ದಾರೆ. ಐಪಿಎಸ್ ಅಧಿಕಾರಿ ಡಿ. ರೂಪ ಅವರು, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ 19 ಆರೋಪಗಳ ಪಟ್ಟಿ ಪೋಸ್ಟ್ ಮಾಡುವ ಮೂಲಕ ಕಿಚ್ಚು ಹಚ್ಚಿದ್ದರು. ಈಗ ರೂಪ ಅವರು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ರೋಹಿಣಿ ಸಿಂಧೂರಿ ಅವರ ಕೆಲವು ಖಾಸಗಿ ಫೋಟೋಗಳನ್ನು ಹರಿಬಿಟ್ಟಿದ್ದಾರೆ. ಇಂತಹ ಫೋಟೋಗಳನ್ನು ಕೆಲವು ಐಎಎಸ್ ಅಧಿಕಾರಿಗಳಿಗೆ ಕಳುಹಿಸಿದ್ದಾರೆ. ಈ ಬಗ್ಗೆ ಅವರ ವಿರುದ್ಧ ತನಿಖೆಯಾಗಬೇಕು ಎಂದು ರೂಪಾ ಮೌದ್ಗಿಲ್ ತಿಳಿಸಿದ್ದರು.
