

ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದಲ್ಲಿರುವ ಲಾಡ್ಲೇ ಮಶಾಕ್ ದರ್ಗಾದಲ್ಲಿ(Ladle Mashak Dargah) ಕಳೆದ ವರ್ಷದ ಶಿವರಾತ್ರಿಯಂದು ಶಿವಲಿಂಗಕ್ಕೆ ಪೂಜೆ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿತ್ತು. ಆದ್ರೆ ಕಲ್ಲು ತೂರಾಟ ಗರ್ಷಣೆ ನಡೆಸಿದ್ರು. ಇದ್ರಿಂದಾಗಿ ಅವತ್ತು ಗಲಾಟೆಯಾಗಿತ್ತು. ಇದೀಗ, ಮತ್ತೆ ಶಿವರಾತ್ರಿ ಬಂದಿದ್ದು, ದರ್ಗಾದಲ್ಲಿ ಹಿಂದೂಗಳ ಪೂಜೆಗೆ ವಕ್ಫ್ ಟ್ರಿಬುನಲ್ ಕೋರ್ಟ್ ಅವಕಾಶ ನೀಡಲಾಗಿದೆ. ಹೀಗಾಗಿ, ಅಲರ್ಟ್ ಆಗಿರುವ ಪೊಲೀಸ್ ಪಡೆ, ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿದೆ.ಪಟ್ಟಣ ದಾದ್ಯಂತ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಆದ್ರೆ ಇದೀಗ ವಕ್ಫ್ ಟ್ರಿಬುನಲ್ ಕೋರ್ಟ್ ಆದೇಶ ಪ್ರಶ್ನಿಸಿ ದರ್ಗಾ ಕಮೀಟಿ ಹೈಕೋರ್ಟ್ ಮೆಟ್ಟಿಲೇರಿದೆ.

ಹೈ ಕೋರ್ಟ್ ಮೆಟ್ಟಿಲೇರಿದ ದರ್ಗಾ ಕಮೀಟಿ
ಇದೇ ಶನಿವಾರ ಶಿವರಾತ್ರಿ ಹಬ್ಬವಿದ್ದು ಅದೇ ದಿನ ಉರುಸ್ ಕೂಡ ಆಚರಣೆ ಮಾಡಲಾಗ್ತಿದೆ. ಹಾಗಾಗಿ
ಫೆಬ್ರವರಿ 18ರಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಉರುಸ್ ಆಚರಿಸಲು ಅವಕಾಶವಿದ್ರೆ, ಮಧ್ಯಾಹದಿಂದ ಸಂಜೆವರೆಗೂ ಶಿವಲಿಂಗಕ್ಕೆ ಪೂಜೆ ಸಲ್ಲಿಸಬಹುದು. ಹದಿನೈದು ಜನರಿಗೆ ಪೂಜೆಗೆ ಅವಕಾಶ ನೀಡಿ ವಕ್ಫ್ ಟ್ರಿಬುನಲ್ ಕೋರ್ಟ್ ಆದೇಶ ಹೊರಡಿಸಿದೆ. ಆದ್ರೆ ಈ ಆದೇಶದ ವಿರುದ್ಧ ದರ್ಗಾ ಕಮೀಟಿ ತಿರುಗಿ ಬಿದ್ದಿದೆ. ಇದೀಗ ವಕ್ಫ್ ಟ್ರಿಬುನಲ್ ಕೋರ್ಟ್ ಆದೇಶ ಪ್ರಶ್ನಿಸಿ ದರ್ಗಾ ಕಮೀಟಿ ಹೈಕೋರ್ಟ್ ಮೆಟ್ಟಿಲೇರಿದೆ. ಶಿವಲಿಂಗ ಪೂಜೆಗೆ ಅವಕಾಶ ನೀಡಬಾರದು ಅಂತ ಲಾಡ್ಲೇ ಮಶಾಕ್ ದರ್ಗಾ ಕಮಿಟಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಇಂದು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಅರ್ಜಿ ವಿಚಾರಣೆ ಸಾಧ್ಯತೆ ಇದೆ. ಈಗಾಗಲೇ ಪೊಲೀಸರು ಬಿಗಿ ಬಂದೋಬಸ್ಥ ಕೈಗೊಂಡಿದ್ದಾರೆ. ಹೈಕೋರ್ಟ್ ಏನು ಆದೇಶ ಹೊರಡಿಸುತ್ತದೆ ಎನ್ನುವ ಕುತೂಹಲ ಮೂಡಿದೆ.

ಕಳೆದ ವರ್ಷ ಶಿವರಾತ್ರಿಯಂದು ರಣರಂಗವಾಗಿದ್ದ ಲಾಡ್ಲೆ ಮಶಾಕ್ ದರ್ಗಾ
ಕಳೆದ ವರ್ಷ ಶಿವರಾತ್ರಿ ಹಬ್ಬದಂದು ಜಿಲ್ಲಾಡಳಿತದ ಆದೇಶದ ಮೇಲೆ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಸವರಾಜ್ ಮತ್ತಮೂಡ್, ಕಡಗಂಚಿ ಮಠದ ಸ್ವಾಮೀಜಿ ಸೇರಿದಂತೆ 10 ಜನರು, ದರ್ಗಾದಲ್ಲಿರುವ ಲಿಂಗಕ್ಕೆ ಪೂಜೆಗೆ ಹೋಗುತ್ತಿದ್ದರು. ಈ ವೇಳೆ ಮತ್ತೊಂದು ಗುಂಪು ಹಾಗೂ ಹಿಂದೂ ಸಂಘಟನೆ ದಿಡೀರನೆ ಕಲ್ಲು ತೂರಾಟ ನಡೆಸಿದರು. ಸಿಕ್ಕಸಿಕ್ಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಕಲಬುರಗಿ ಜಿಲ್ಲಾಧಿಕಾರಿ ಕಾರು, ಶಾಸಕ ಸುಭಾಷ್ ಗುತ್ತೇದಾರ್ ಅವರ ಕಾರು ಸೇರಿದಂತೆ ಅನೇಕ ಕಾರಿನ ಗಾಜುಗಳು ಪುಡಿಪುಡಿಯಾಗಿದ್ದವು. ಕೆಲ ಪೊಲೀಸ್ ಸಿಬ್ಬಂದಿ, ಹಾಗೇ ಮಾಧ್ಯಮದವರಿಗೆ ಕೂಡ ಘಟನೆಯಲ್ಲಿ ಗಾಯಗಳಾಗಿದ್ದವು.