

ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, “ಟಿಪ್ಪು ಸುಲ್ತಾನನ ಎಲ್ಲಾ ಅನುಯಾಯಿಗಳನ್ನು ಕೊಲ್ಲಬೇಕು” ಎಂದು ಹೇಳಿರುವುದಾಗಿ ‘ಎನ್‌ಡಿಟಿವಿ’ ವರದಿ ಮಾಡಿದೆ. ಟಿಪ್ಪು ಸುಲ್ತಾನ್ ವಂಶಸ್ಥರನ್ನು ಓಡಿಸಿ ಕಾಡಿಗೆ ಕಳುಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಇಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಂಚಾಯತ್ ಪಟ್ಟಣದಲ್ಲಿ ಬಿಜೆಪಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಕಟೀಲು, “ನಾವು ಶ್ರೀರಾಮ, ಹನುಮಂತನ ಭಕ್ತರು. ನಾವು ಹನುಮಂತ ದೇವರಿಗೆ ಪ್ರಾರ್ಥನೆ ಮತ್ತು ನಮನ ಸಲ್ಲಿಸುತ್ತೇವೆ. ನಾವು ಟಿಪ್ಪು ವಂಶಸ್ಥರಲ್ಲ. ಟಿಪ್ಪು ವಂಶಸ್ಥರನ್ನು ಮನೆಗೆ ಕಳುಹಿಸೋಣ” ಎಂದಿದ್ದಾರೆ.

ನೀವು ಹನುಮಂತನನ್ನು ಪ್ರಾರ್ಥಿಸುತ್ತೀರೋ, ಟಿಪ್ಪುವಿಗೆ ಪ್ರಾರ್ಥನೆ ಸಲ್ಲಿಸುತ್ತೀರೋ ಎಂದು ಕೇಳುತ್ತಿದ್ದೇನೆ. ಹಾಗಾದರೆ ನೀವು ಟಿಪ್ಪುವಿನ ಕಟ್ಟಾ ಅನುಯಾಯಿಗಳನ್ನು ಕಾಡಿಗೆ ಕಳುಹಿಸುತ್ತೀರಾ? ಯೋಚಿಸಿ. ಈ ರಾಜ್ಯಕ್ಕೆ ಭಗವಾನ್ ಹನುಮಾನ್ ಭಕ್ತರು ಬೇಕೋ ಅಥವಾ ಟಿಪ್ಪುವಿನ ವಂಶಸ್ಥರು ಬೇಕೋ? ಟಿಪ್ಪುವಿನ ಕಟ್ಟಾ ಅನುಯಾಯಿಗಳು ಈ ನೆಲದಲ್ಲಿ ಜೀವಂತವಾಗಿರಬಾರದು” ಎಂದು ಅವರು ಪ್ರಚೋದಿಸಿರುವುದಾಗಿ ವರದಿ ತಿಳಿಸಿದೆ.

ಬ್ರಿಟಿಷರೊಂದಿಗೆ ಹೋರಾಡಿದ ಟಿಪ್ಪು ಸುಲ್ತಾನ್‌ನನ್ನು ವಿರೋಧಿಸುತ್ತಾ ಬಂದಿರುವ ಬಿಜೆಪಿ ಮೊದಲಿನಿಂದಲೂ ಕೋಮು ಧ್ರುವೀಕರಣದ ರಾಜಕೀಯ ಮಾಡುತ್ತಿದೆ. ಟಿಪ್ಪು ಸುಲ್ತಾನ್ ವರ್ಸಸ್ ಹನುಮಾನ್ ಚರ್ಚೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕರ್ನಾಟಕದಲ್ಲಿ 2018 ರ ಚುನಾವಣೆಗೆ ಮುಂಚಿತವಾಗಿ ಪ್ರಚೋದಿಸಿದ್ದರು.
ಟಿಪ್ಪುವಿನ ಕುರಿತು ತಪ್ಪು ಕಲ್ಪನೆಗಳು
ಮೈಸೂರು ರಾಜ್ಯವನ್ನು ಆಳಿದ ’ಟಿಪ್ಪು ಸುಲ್ತಾನ್’ ಮತಾಂಧ, ಹಿಂದೂಗಳ ವಿರೋಧಿ, ನರಮೇಧ ನಡೆಸಿದವನು, ಕನ್ನಡ ವಿರೋಧಿ, ಅಸಂಖ್ಯಾತ ಹಿಂದೂಗಳನ್ನು ಇಸ್ಲಾಂಗೆ ಮತಾಂತರ ಮಾಡಿದವನು, ದೇವಾಲಯಗಳನ್ನು ಧ್ವಂಸ ಮಾಡಿದವನು- ಇತ್ಯಾದಿ ಸುಳ್ಳುಗಳನ್ನು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಪ್ರಚಾರ ಮಾಡಲಾಗುತ್ತಿದೆ. ಟಿಪ್ಪುವಿನ ಕುರಿತು ಹಬ್ಬಿಸಲಾದ ಇಂತಹ ಸುಳ್ಳುಗಳ ಕುರಿತು ಇತಿಹಾಸಕಾರರು, ವಿಚಾರವಂತರು ಸಾಕಷ್ಟು ಚರ್ಚೆ ಮಾಡಿದ್ದಾರೆ.
ಶೃಂಗೇರಿಯ ಮಠಾಧೀಶರಾಗಿದ್ದ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರಿಗೆ ಟಿಪ್ಪು ಬರೆದಿರುವ ಹಲವು ಪತ್ರಗಳೇ ಆತನ ಪರಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗಿವೆ. ಸ್ವಾಮೀಜಿಯವರಿಗೆ ಟಿಪ್ಪು ಬರೆದಿರುವ ಪತ್ರಗಳು ಕನ್ನಡದಲ್ಲಿರುವುದು- ಟಿಪ್ಪು ಕನ್ನಡ ವಿರೋಧಿ ಎನ್ನುವವರಿಗೆ ಉತ್ತರವಾಗಿವೆ. ಮರಾಠರ ಸೇನೆ ಶೃಂಗೇರಿ ಮಠದ ಮೇಲೆ ದಾಳಿ ಮಾಡಿದಾಗ, ಟಿಪ್ಪು ಸ್ವಾಮೀಜಿಯವರಿಗೆ ಪತ್ರ ಬರೆದು ಸಂತೈಸಿದ್ದಾರೆ. ಮಠಕ್ಕೆ, ಧಾರ್ಮಿಕ ಆಚರಣೆಗಳಿಗೆ ಬೇಕಾದ ಎಲ್ಲ ಸಹಕಾರವನ್ನು ಟಿಪ್ಪು ನೀಡಿರುವುದು ಇಲ್ಲಿನ ಪತ್ರಗಳಿಂದ ಸ್ಪಷ್ಟವಾಗುತ್ತದೆ. ಅಲ್ಲದೇ ಸ್ವಾಮೀಜಿಯವರ ಕುರಿತು ಟಿಪ್ಪುವಿಗೆ ಇದ್ದ ಪ್ರೀತಿ, ಗೌರವ ಮಹತ್ವದ್ದು.
ಸ್ವಾಮೀಜಿಯವರು ಪುಣೆಗೆ ಹೋಗಿ ಹಲವು ದಿನಗಳಾದರೂ ವಾಪಸ್ ಬರದಿದ್ದಾಗ ಟಿಪ್ಪು ಪತ್ರ ಬರೆದು, “ಶ್ರೀ ಸ್ವಾಮೀಜಿಯವರಿಗೆ ಟಿಪ್ಪು ಸುಲ್ತಾನ್ ಬಾದಶಹರವರ ಸಲಾಮು…. ತಮ್ಮಂಥಾ ದೊಡ್ಡವರು ಯಾವ ದೇಶದಲ್ಲಿ ಇದ್ದರೂ ಆ ದೇಶಕ್ಕೆ ಮಳೆ, ಬೆಳೆ ಸಕಲವೂ ಆಗಿ ಸುಭಿಕ್ಷೆಯೂ ಆಗಿ ಇರತಕ್ಕದ್ದರಿಂದ ಪರಸ್ಥಳದಲ್ಲಿ ಬಹಳ ದಿವಸ ತಾವು ಯಾತಕ್ಕೆ ಇರಬೇಕು? ಹೋದ ಕೆಲಸವನ್ನು ಕ್ಷಿಪ್ರದಲ್ಲಿ ಅನುಕೂಲ ಮಾಡಿಸಿಕೊಂಡು ಸ್ಥಳಕ್ಕೆ ಸಾಗಿಬರುವಂತೆ ಮಾಡಿಸುವುದು…” ಎಂದು ಭಿನ್ನವಿಸಿಕೊಳ್ಳುವುದು ಹೃದಯಸ್ಪರ್ಶಿಯಾಗಿದೆ. ಟಿಪ್ಪುವಿಗೆ ಇಸ್ಲಾಮೀ ಶಿಕ್ಷಣವನ್ನು ಮೌಲವಿ ಉಬೇದುಲ್ಲಾಹ್ ನೀಡಿದರೆ, ಹಿಂದೂ ಧಾರ್ಮಿಕ ಶಿಕ್ಷಣವನ್ನು ಗೋವರ್ಧನ ಪಂಡಿತರು ನೀಡಿದ್ದರು.
