

ಬೆಂಗಳೂರು (ಫೆ.16) : ಆಡಳಿತಾರೂಢ ಬಿಜೆಪಿಯಲ್ಲಿರುವ ಮೂವರು ಮಾಜಿ ಮುಖ್ಯಮಂತ್ರಿಗಳ ಪೈಕಿ ಬಿ.ಎಸ್.ಯಡಿಯೂರಪ್ಪ(BS Yadiyurappa) ಅವರೊಬ್ಬರನ್ನು ಬಿಟ್ಟರೆ ಇನ್ನುಳಿದ ಜಗದೀಶ್ ಶೆಟ್ಟರ್ ಹಾಗೂ ಡಿ.ವಿ.ಸದಾನಂದಗೌಡರು ದಿನೇ ದಿನೇ ನೇಪಥ್ಯಕ್ಕೆ ಸರಿಯುತ್ತಿರುವಂತೆ ಮೇಲ್ನೋಟಕ್ಕಂತೂ ಕಾಣುತ್ತಿದೆ. ಇದಕ್ಕೆ ಪೂರಕ ಎಂಬಂತೆ ಶೆಟ್ಟರ್ ಮತ್ತು ಸದಾನಂದಗೌಡರು ಅವರವರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗುತ್ತಿದ್ದಾರೆ ಅಥವಾ ಸೀಮಿತಗೊಳಿಸಲಾಗುತ್ತಿದೆ. ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ್ದರೂ ಶೆಟ್ಟರ್ ಅವರನ್ನು ಪಕ್ಷದ ಪ್ರಮುಖ ಹಂತದಲ್ಲಿ ಒಳಗೊಳ್ಳಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಧಾರವಾಡ ಸಮಾರಂಭದಲ್ಲಿ ಶೆಟ್ಟರ್ ಹೆಸರನ್ನೇ ಕೈಬಿಡಲಾಗಿತ್ತು. ಇದೀಗ ಶೆಟ್ಟರ್ ಅವರಿಗೆ ಮುಂದಿನ ಬಾರಿ ಟಿಕೆಟ್ ನೀಡುವುದಿಲ್ಲ ಎಂಬ ವದಂತಿಯೂ ಹಬ್ಬಿದೆ. ಈ ಹಿನ್ನೆಲೆಯಲ್ಲಿ ‘ ‘ ಶೆಟ್ಟರ್ ಅವರು ತಮ್ಮನ್ನು ಪಕ್ಷದಲ್ಲಿ ಸಮರ್ಥವಾಗಿ ಬಳಕೆ ಮಾಡಿಕೊಳ್ಳದೇ ಇರುವುದಕ್ಕೆ ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ.

ಮೂರ್ನಾಲ್ಕು ಬಾರಿ ಗೆದ್ದವರಿಗೆ ಈ ಬಾರಿ ಟಿಕೆಟ್ ಇಲ್ಲ ಎಂಬ ಮಾತು ಬಿಜೆಪಿ ಪಾಳಯದಲ್ಲಿ ದಟ್ಟವಾಗಿದೆ?
ಪಕ್ಷದ ಯಾವುದೇ ವೇದಿಕೆಯಲ್ಲಿ ಇಂಥ ಯಾವುದೇ ಚರ್ಚೆ ನಡೆದಿಲ್ಲ. ವರಿಷ್ಠರು ಈ ಬಗ್ಗೆ ರಾಜ್ಯ ನಾಯಕರೊಂದಿಗೆ ಪ್ರಸ್ತಾಪವನ್ನೂ ಮಾಡಿಲ್ಲ. ನಾಲ್ಕೈದು ಬಾರಿ ಗೆದ್ದವರಿಗೆ ಟಿಕೆಟ್ ನೀಡುವುದಿಲ್ಲ ಎಂಬುದಾಗಿ ಯಾರು ಹೇಳಿದ್ದಾರೆ? ಎಲ್ಲಿ ಹೇಳಿದ್ದಾರೆ? ಕೇವಲ ಗುಸು ಗುಸು ಮಾತುಗಳಷ್ಟೇ. ಗೆಲ್ಲುವುದಿಲ್ಲ ಎಂಬ ಆಂತರಿಕ ವರದಿ ಇದ್ದರೆ ಅಂಥವರಿಗೆ ಸಹಜವಾಗಿಯೇ ಟಿಕೆಟ್ ನೀಡುವುದಿಲ್ಲ. ಗೆಲ್ಲುವ ಸಾಮರ್ಥ್ಯ ಇರುವವರಿಗೆ ಟಿಕೆಟ್ ತಪ್ಪಿಸುವ ಕೆಲಸವನ್ನೂ ಮಾಡುವುದಿಲ್ಲ.

ಪಕ್ಷದ ಮೂರೂ ಮಾಜಿ ಸಿಎಂಗಳಿಗೂ ಮುಂದಿನ ಯಾವುದೇ ಚುನಾವಣೆಗಳಲ್ಲಿ ಟಿಕೆಟ್ ಇಲ್ಲವಂತೆ ಹೌದೇ?
-ನೋಡಿ, ಯಡಿಯೂರಪ್ಪ ಅವರೇ ತಾವು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದಾಗಿ ಸ್ವತಃ ಘೋಷಣೆ ಮಾಡಿದ್ದಾರೆ. ಸದಾನಂದಗೌಡರು(DV Sadanandagowda) ಸದ್ಯ ಸಂಸದರಾಗಿದ್ದಾರೆ. ಅವರಿಗೆ ಇನ್ನೂ ಒಂದು ವರ್ಷ ಸಮಯವಿದೆ. ಇನ್ನು ನನ್ನ ಬಗ್ಗೆ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ನಾನು ಮತ್ತೆ ಹಾಲಿ ಕ್ಷೇತ್ರದಿಂದಲೇ ಚುನಾವಣೆ ಸ್ಪರ್ಧಿಸುತ್ತೇನೆ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ನಾನು ಸ್ಪರ್ಧಿಸಬಾರದು ಎಂಬ ಸೂಚನೆ ಪಕ್ಷದಿಂದಲೂ ಬಂದಿಲ್ಲ. ಚರ್ಚೆಯೂ ನಡೆದಿಲ್ಲ.
ನಿಮ್ಮ ಬಗ್ಗೆ ಯಾರು ವದಂತಿ ಹಬ್ಬಿಸುತ್ತಿರುವವರು? ಸ್ವಪಕ್ಷೀಯರೆ ಅಥವಾ ಅನ್ಯ ಪಕ್ಷದವರೇ?
ಯಾರಾದರೂ ಕೆಲವರು ಇರುತ್ತಾರೆ. ಪಟ್ಟಭದ್ರ ಹಿತಾಸಕ್ತಿಗಳು. ಅದಕ್ಕೆ ಏನೂ ಮಾಡುವುದಕ್ಕೆ ಆಗುವುದಿಲ್ಲ. ಏನೋ ಒಂದು ಲೆಕ್ಕಾಚಾರ ಇಟ್ಟುಕೊಂಡು ಪ್ರಯತ್ನ ಮಾಡುತ್ತಿರಬಹುದು. ನಾನು ಅದರ ಬಗ್ಗೆ ಹೆಚ್ಚಿಗೆ ಹೇಳಲು ಬಯಸುವುದಿಲ್ಲ.ಎಂದರು
