ಕರ್ನಾಟಕದಲ್ಲೇ ಕುತೂಹಲದ ಕ್ಷೇತ್ರವಾಯ್ತು ಕಾರ್ಕಳ


ಉಡುಪಿ: ಕರ್ನಾಟಕದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರ (Karkala Vidhanasabha Constituency) ಗಮನ ಸೆಳೆಯುತ್ತಿದೆ. ಸುನಿಲ್ ಕುಮಾರ್ (Sunil kUmar) ಬಿಜೆಪಿಯ ಭದ್ರಕೋಟೆಯನ್ನು ಕಟ್ಟಿಕೊಂಡಿರುವಾಗ, ಶ್ರೀರಾಮ ಸೇನೆ (Sri Ram Sena) ಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ರಣಾಂಗಣಕ್ಕೆ ನುಸುಳಿದ್ದಾರೆ. ಭಜರಂಗದಳದ ಗುರು-ಶಿಷ್ಯರು 2023ರಲ್ಲಿ ಎದುರಾಳಿಗಳಾಗುತ್ತಾರೆ ಎಂದು ಯಾವ ಚುನಾವಣಾ ಪಂಡಿತರೂ ಲೆಕ್ಕ ಹಾಕಿರಲಿಲ್ಲ. ಕಳೆದ ಮೂರು ತಿಂಗಳಿಂದ ಹೀಗೊಂದು ಚರ್ಚೆ ನಡೆಯುತ್ತಿದ್ದರೂ, ಕಚೇರಿ ತೆರೆದು ಪ್ರಚಾರದ ಓಡಾಟ ಶುರು ಮಾಡುವ ಮೂಲಕ ಮುತಾಲಿಕ್ ಸ್ಪರ್ಧೆಯನ್ನು ಪಕ್ಕಾ ಮಾಡಿದ್ದಾರೆ.


ಈ ನಡುವೆ ನನ್ನಲ್ಲಿ ಕಾಸಿಲ್ಲ ವೋಟಿನ ಜೊತೆ ನೂರು ರೂಪಾಯಿ ನೋಟು ಕೊಡಿ ಎಂದು ಬಹಿರಂಗವಾಗಿ ಬೇಡಿಕೆ ಇಟ್ಟಿದ್ದು ಚರ್ಚೆಗೆ ಕಾರಣವಾಗಿದೆ. ಸುನೀಲ್ ಕುಮಾರ್ ಹಿಂದುತ್ವ ಮತ್ತು ಭ್ರಷ್ಟಾಚಾರ ಮಾಡಿರುವ ಕಾರಣಕ್ಕೆ ನಾನು ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದೇನೆ ಎಂದು ಪ್ರಮೋದ್ ಮುತಾಲಿಕ್ ಘೋಷಣೆ ಮಾಡಿದ್ದರು. ಚುನಾವಣಾ ಖರ್ಚಿಗೆ ಕಾಸು ಕೇಳುತ್ತಿದಂತೆಯೇ ಮೂರು ತಿಂಗಳುಗಳ ಕಾಲ ಸುಮ್ಮನಿದ್ದ ಸುನಿಲ್, ತನ್ನ ಮೊದಲ ಟ್ವೀಟ್ ಅಸ್ತ್ರವನ್ನ ಪ್ರಯೋಗಿಸಿದ್ದಾರೆ.

ಸುನೀಲ್ ಕುಮಾರ್ ಟ್ವೀಟ್: ಪ್ರಿಯ ಮುತಾಲಿಕ್ ಜೀ, ನೀವು ಆಮಿಷಕ್ಕೆ ಒಳಗಾಗಿಯೇ ಕಾರ್ಕಳದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೀರಿ ಎಂದು ನಮಗೆ ಮೊದಲೇ ಅನುಮಾನವಿತ್ತು. ಅದೀಗ ನಿಜವಾಗಿದೆ!. ಸ್ವಂತ ಬುದ್ಧಿಯಿಂದ ನೀವು ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ನೀವು ಕಾರ್ಕಳದಿಂದ ಸ್ಪರ್ಧೆಗೆ ಇಳಿಯುವುದನ್ನು ನಾನು ಮೊದಲೇ ಸ್ವಾಗತಿಸಿದ್ದೇನೆ. ಈಗ ನಿಮಗೆ ತನು ಮನ ಧನ ಸಹಾಯ ಮಾಡುವವರೂ ಕಾರ್ಕಳಕ್ಕೆ ಬಂದು ಪ್ರಚಾರ ಮಾಡಲಿ ಎಂದು ನಾನು ಆಶಿಸುತ್ತೇನೆ.
ನಿಮ್ಮ ಸ್ಪರ್ಧೆಯ ಉದ್ದೇಶ ಏನೆಂಬುದನ್ನು ಕೆಲ ದಿನಗಳ ಹಿಂದೆ “ವೋಟು, ನೋಟು” ಹೇಳಿಕೆಯ ಮೂಲಕ ತಿಳಿಸಿದ್ದಿರಿ. ಈಗ ತನುಮನಧನ ಸಹಾಯವಿದೆ ಎಂದು ಹೇಳುತ್ತಿದ್ದೀರಿ. ಒಟ್ಟಾರೆಯಾಗಿ ನಿಮ್ಮಈ ಸ್ಪರ್ಧೆಯ ಉದ್ದೇಶ ಕಾರ್ಕಳದ ಹಿತವಲ್ಲ, ಹಿಂದುತ್ವದ ಹಿತವಲ್ಲ, ಜನತೆಯ ಹಿತವೂ ಅಲ್ಲ. ಅದು “ತನು- ಮನ-ಧನ” – ನೋಟಿಗಾಗಿ ಎಂಬುದು ನಿಮ್ಮ ಹೇಳಿಕೆಯಲ್ಲೇ ಸ್ಪಷ್ಟವಾಗಿದೆ.
ಮುತಾಲಿಕ್ ಗರಂ: ಸಾಮಾಜಿಕ ಜಾಲತಾಣ (Social Media) ದಲ್ಲಿ ಸುನಿಲ್ ಕುಮಾರ್ ಅಪ್ಡೇಟ್ ಮಾಡುತ್ತಿದ್ದಂತೆ ಮುತಾಲಿಕ್ ಕಿಡಿಕಾರಿದ್ದಾರೆ. ಕಾರ್ಕಳಕ್ಕೆ ಬರುವಾಗ ನೀವು ಹೇಗಿದ್ರಿ, ಈಗ ಹೇಗಿದ್ದೀರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ಈ ಸಾರಿ ಅಸಲಿ ಮತ್ತು ನಕಲಿ ಹಿಂದುತ್ವದ ನಡುವೆ ವಾರ್ ಎಂದು ಮುತಾಲಿಕ್ ಎಚ್ಚರಿಸಿದ್ದಾರೆ.
ಹಿಂದೂ ಮದ್ದಾನೆಗಳ ಗುದ್ದಾಟ ನೋಡುತ್ತಾ ಕಾರ್ಕಳದ ಕಾಂಗ್ರೆಸ್ ಕನಲಿ ಹೋದಂತಿದೆ. ವೀರಪ್ಪ ಮೊಯಿಲಿ ಮೂಲ ಕ್ಷೇತ್ರದಲ್ಲಿ ಜಗಳದ ಲಾಭವಾಗುತ್ತಾ ಅಂತ ಕಾಂಗ್ರೆಸ್ ಲೆಕ್ಕಾಚಾರ ಹಾಕುತ್ತಿದೆ. ಸದ್ಯ ಕ್ಯಾಂಡಿಡೇಟ್ ಯಾರು ಅನ್ನೋ ಕನ್ಫ್ಯೂಷನ್ ನಲ್ಲೇ ಕಾಂಗ್ರೆಸ್ ಇದೆ.
