

ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಚುನಾವಣೆ (Karnataka Election 2023) ಸಮೀಪಿಸುತಿದ್ದಂತೆ ಜನಪ್ರತಿನಿಧಿಗಳು ಜನರ ಓಲೈಕೆಗಾಗಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಗುದ್ದಲಿಪೂಜೆ, ಶಂಕುಸ್ಥಾಪನೆಗಳು ಭರ್ಜರಿಯಾಗಿ ನಡೆಯುತ್ತಿದೆ. ಆದರೆ ತಮ್ಮೂರಿನ ಸಮಸ್ಯೆ ಬಗೆಹರಿಸಿಕೊಡಿ ಅಂದ್ರೆ, ಪ್ರಶ್ನೆ ಮಾಡಿದ ಜನರಿಗೆ ದಮ್ಕಿ ಹಾಕಿ ಭಟ್ಕಳದ ಬಿಜೆಪಿ ಶಾಸಕ ಇದೀಗ ವಿವಾದಕ್ಕೀಡಾಗಿದ್ದಾರೆ.

ಹೌದು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (Bhatkal) ದ ಬೈಲೂರು ಗ್ರಾಮದಲ್ಲಿ ಕೇವಲ 400 ಮೀಟರ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಭಟ್ಕಳ ಬಿಜೆಪಿ ಎಂಎಲ್ಎ ಸುನೀಲ್ ನಾಯ್ಕ್ ಗ್ರಾಮಕ್ಕೆ ಆಗಮಿಸಿದ್ರು. ಆದರೆ ಗ್ರಾಮದ 1.8 ಕಿಲೋ ಮೀಟರ್ ರಸ್ತೆ ಹಾಳಾಗಿದ್ದು, ಸರಿಪಡಿಸಿಕೊಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸರಿಪಡಿಸಿಕೊಡದೇ ಕೇವಲ 400 ಮೀಟರ್ ರಸ್ತೆಗೆ ಭೂಮಿ ಪೂಜೆ ನೆರವೇರಿಸಲು ಆಗಮಿಸಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಹಾಗೆ ಹಾಳಾದ ರಸ್ತೆ ಸರಿಪಡಿಸುವವರೆಗೆ ಭೂಮಿ ಪೂಜೆ ಮಾಡದಂತೆ ಪ್ರತಿಭಟಿಸಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಬಿಜೆಪಿ ಶಾಸಕ ಸುನಿಲ್ ನಾಯ್ಕ್ (Sunil Naik) ಯಾವಾಗ ರಸ್ತೆ ಮಾಡಬೇಕು ನನಗೆ ಗೊತ್ತಿದೆ, ನಾನು ಮಾಡೋದೇ ಇಷ್ಟು, ತಾಕತ್ತಿದ್ದರೆ ಭೂಮಿ ಪೂಜೆ ನಿಲ್ಲಿಸಿ ಎಂದು ಗ್ರಾಮಸ್ಥರಿಗೆ ಆವಾಜ್ ಹಾಕಿದ್ದಾರೆ.

ಸದ್ಯ ಭಟ್ಕಳ ಶಾಸಕ ಸುನಿಲ್ ನಾಯ್ಕ ಗ್ರಾಮಸ್ಥರಿಗೆ ಅವಾಜ್ ಹಾಕಿರೋ ವೀಡಿಯೋ ಫುಲ್ ವೈರಲ್ ಆಗಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರೋ ಶಾಸಕರು, ಚುನಾವಣೆ ಹತ್ತಿರ ಬಂದಿದ್ದರಿಂದ ಕಾಂಗ್ರೆಸ್ (Congress) ಮಾಜಿ ಶಾಸಕರ ಬೆಂಬಲಿಗರು ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಅವರಿಗೆಲ್ಲಾ ಹೆದರುವ ಶಾಸಕ ನಾನಲ್ಲ, ಜನರಿಗೋಸ್ಕರ ರಸ್ತೆ ಮಾಡುತ್ತೇನೆ ಎಂದಿದ್ದು, ಇದೆಲ್ಲ ಮಾಜಿ ಶಾಸಕರ ಪಿತೂರಿ ಎಂದಿದ್ದಾರೆ.

ಒಟ್ಟಾರೆ ಚುನಾವಣೆ ಸಮೀಪಿಸುತಿದ್ದಂತೆ ಕ್ಷೇತ್ರ ಮರೆತವರಿಗೂ ಮತದಾರರ ನೆನಪು ಬರುವುದು ಸಹಜ. ಹಾಗೆಯೇ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಕ್ಷೇತ್ರದ ಮತದಾರರನ್ನು ಸೆಳೆಯಲು ಹಾಲಿ ಶಾಸಕರು ಮುಂದಾಗಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ.
