

ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿಯವರ ಪಾತ್ರದ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ತಿಂಗಳೊಳಗೆ ಭಾರತದ ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮಾಧ್ಯಮಗಳ ಮೇಲಿನ ಬೆದರಿಕೆ ಸಲ್ಲದು ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತಾಕೀತು ಮಾಡಿದೆ.
ಸರ್ಕಾರದ ನೀತಿಗಳನ್ನು ಟೀಕಿಸುವ, ಆಡಳಿತವನ್ನು ಪ್ರಶ್ನಿಸುವ ಮಾಧ್ಯಮ ಸಂಸ್ಥೆಗಳನ್ನು ಬೆದರಿಸಲು ಮತ್ತು ಕಿರುಕುಳ ನೀಡಲು ಸರ್ಕಾರಿ ಏಜೆನ್ಸಿಗಳನ್ನು ಬಳಸಿಕೊಳ್ಳುವ ಪ್ರವೃತ್ತಿಯ ಮುಂದುವರಿಕೆಯಾಗಿ ಐಟಿ ಇಲಾಖೆಯ ‘ಸಮೀಕ್ಷೆಗಳು’ ನಡೆಯುತ್ತಿವೆ ಎಂದು ಗಿಲ್ಡ್ ಹೇಳಿಕೆಯಲ್ಲಿ ತಿಳಿಸಿದೆ.

ಸರ್ವೆ” ಎಂದು ಕರೆಯಲ್ಪಡುವ ಈ ದಾಳಿಗಳು ಸರ್ಕಾರಿ ಏಜೆನ್ಸಿಗಳ ದುರುಪಯೋಗದ ಮೂಲಕ ಬೆದರಿಸುವ ಕ್ರಿಯೆಯೇ ಹೊರತು ಬೇರೇನೂ ಅಲ್ಲ” ಎಂದು ಬಿಬಿಸಿ ದೆಹಲಿಯ ಮಾಜಿ ಡೆಪ್ಯೂಟಿ ಚೀಫ್ ಆಫ್ ಬ್ಯೂರೋ ಪತ್ರಕರ್ತ ಸತೀಶ್ ಜಾಕೋಬ್ ತಿಳಿಸಿದ್ದಾರೆ.
2002ರ ಗುಜರಾತ್ ಗಲಭೆ ಮತ್ತು ಮೋದಿಯ ಆಡಳಿತದಲ್ಲಿ ಅಲ್ಪಸಂಖ್ಯಾತರ ಪರಿಸ್ಥಿತಿಯ ಕುರಿತು ಬಿಬಿಸಿಯು 2 ಕಂತುಗಳು ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿದೆ. ಆದರೆ ಅವು ದುರುದ್ದೇಶದಿಂದ ಕೂಡಿವೆ ಎಂದು ಕೇಂದ್ರ ಸರ್ಕಾರ ಭಾರತದಲ್ಲಿ ಅವುಗಳ ಪ್ರಸಾರವನ್ನು ತಡೆಹಿಡಿದಿತ್ತು. ಇದೇ ಸಂದರ್ಭದಲ್ಲಿ ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ ನಡೆದಿರುವುದು ಆತಂಕಕಾರಿ ಬೆಳೆವಣಿಗೆ ಎಂದು ಗಿಲ್ಡ್ ಹೇಳಿದೆ.
