

ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ 5 ದಿನಗಳ ಕಾಲ ನಡೆಯುವ ವಿಶ್ವದ ಗಮನ ಸೆಳೆಯುವ ಏರೋ ಇಂಡಿಯಾ-2023 (Aero India 2023) ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಧಿಕೃತ ಚಾಲನೆ ನೀಡಿದರು.
ದೇಶದ 32 ದೇಶದ ರಕ್ಷಣಾ ಸಚಿವರು, 29 ರಾಷ್ಟ್ರಗಳ ವಾಯುಪಡೆಯ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸಾರಂಗ್, ಸೂರ್ಯಕಿರಣ್, ವೈಮಾನಿಕ ಪ್ರದರ್ಶನ ತಂಡ, ಸುಖೋಯ್, ರಫೆಲ್ (Rafale Jet), ತೆಜಸ್ ಸೇರಿದಂತೆ ಒಟ್ಟು 67 ವಿಮಾನಗಳಿಂದ ಸಾಹಸ ಪ್ರದರ್ಶನ ನಡೆಯಲಿದೆ. ಕಳೆದ ಬಾರಿ 44 ವಿಮಾನಗಳು ಪ್ರದರ್ಶನ ತೋರಿದ್ದವು.

ಏರ್ ಶೋನ (Air Show) ಮೊದಲ ಮೂರು ದಿನ ವಹಿವಾಟಿಗೆ ಸೀಮಿತಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಫೆ.16, 17 ರಂದು ಮಾತ್ರ ವೈಮಾನಿಕ ಪ್ರದರ್ಶನ ನೋಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಇಂಡಿಯನ್ ಪೆವಿಲಿಯನ್ ವಿಶೇಷ ಹೇಗಿದೆ ಗೊತ್ತಾ?
ಭಾರತ ನಿರ್ಮಿತ ಯುದ್ಧ ವಿಮಾನ (Fighter Jet), ಹೆಲಿಕಾಪ್ಟರ್ ಹಾಗೂ ತಂತ್ರಜ್ಞಾನಗಳ ಪ್ರದರ್ಶನಕ್ಕಾಗಿಯೇ ಪ್ರತ್ಯೇಕವಾಗಿ ಇಂಡಿಯನ್ ಪೆವಿಲಿಯನ್ ನಿರ್ಮಾಣ ಮಾಡಲಾಗಿದೆ. ಅದರಲ್ಲಿ 115 ಕಂಪನಿಗಳು, 227 ಉತ್ಪನ್ನಗಳ ಪ್ರದರ್ಶನಕ್ಕಿಡಲಾಗುತ್ತಿದೆ. 149 ಉತ್ಪನ್ನಗಳನ್ನ ಭೌತಿಕವಾಗಿಯೇ ಪ್ರದರ್ಶಿಸಲಾಗಿದೆ. ಇದನ್ನೂ ಓದಿ: ರಾಜಭವನದಲ್ಲಿ ಮೋದಿ ರಾತ್ರಿ ವಾಸ್ತವ್ಯ – 800ಕ್ಕೂ ಹೆಚ್ಚು ಪೊಲೀಸರಿಂದ ಬಿಗಿಭದ್ರತೆ

ಏರ್ ಶೋ ಮುಖ್ಯಾಂಶಗಳೇನು?
ಈ ಬಾರಿ ಏರ್ ಶೋನಲ್ಲಿ ಏರ್ ಬಸ್, ಬೋಯಿಂಗ್, ಡಸಾಲ್ಟ್ ಏವಿಯೇಷನ್, ಲಾಕ್ಹೀಡ್ ಮಾರ್ಟಿನ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್, ಬ್ರಹ್ಮೋಸ್ ಏರೋಸ್ಪೇಸ್, ಆರ್ಮಿ ಏವಿಯೇಷನ್, ಹೆಚ್.ಸಿ ರೋಬೋಟಿಕ್ಸ್, ಎಸ್‌ಎಎಬಿ, ಸಫ್ರಾನ್, ರೋಲ್ಸ್ ರಾಯ್ಸ್, ಲಾರ್ಸನ್ ಮತ್ತು ಟೂಬ್ರೊ, ಭಾರತ್ ಫೋರ್ಜ್ ಲಿಮಿಟೆಡ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ಮತ್ತು ಬಿಇಎಂಎಲ್ ಲಿಮಿಟೆಡ್ ಪ್ರಮುಖ ಪ್ರದರ್ಶಕರು ಪಾಲ್ಗೊಂಡಿದ್ದಾರೆ.

ಭವಿಷ್ಯದ ತಂತ್ರಜ್ಞಾನಗಳ ಪ್ರದರ್ಶನ:
ಭವಿಷ್ಯದಲ್ಲಿ ತಂತ್ರಜ್ಞಾನದ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಲಘು ಯುದ್ಧ ವಿಮಾನ (LCA) -ತೇಜಸ್, HIT-40, ಡಾರ್ನಿಯರ್ ಲಘು ಯುಟಿಲಿಟಿ ಹೆಲಿಕಾಪ್ಟರ್ (LUH), ಲಘು ಯುದ್ಧ ಹೆಲಿಕಾಪ್ಟರ್ (LCH) ಮತ್ತು ಮುಂದುವರಿದ ಲಘು ಹೆಲಿಕಾಪ್ಟರ್ (ALH) ನಂತಹ ದೇಶೀಯ ವಾಯು ವೇದಿಕೆಗಳ ರಫ್ತನ್ನು ಉತ್ತೇಜಿಸುವ ಗುರಿಯನ್ನು ಏರ್ ಶೋ ಹೊಂದಿದೆ.
ಏರ್ ಶೋ ನಲ್ಲಿ 100ಕ್ಕೂ ಅಧಿಕ ಮಿತ್ರ ರಾಷ್ಟ್ರಗಳು ಭಾಗಿಯಾಗಲಿದ್ದು, ಕಳೆದ ಎಲ್ಲಾ ವರ್ಷಗಳ ದಾಖಲೆಯನ್ನ ಈ ಬಾರಿ ಏರ್ ಶೋ ಮುರಿಯುವ ವಿಶ್ವಾಸವಿದೆ ಅಂತಾ ರಕ್ಷಣಾ ಸಚಿವರು ಹೇಳಿದ್ದಾರೆ. ಒಟ್ಟಿನಲ್ಲಿ 5 ದಿನಗಳ ಕಾಲ ಬಾನಂಗಳದಲ್ಲಿ ಲೋಹದ ಹಕ್ಕಿಗಳು ಚಮತ್ಕಾರ, ಕಮಾಲ್ ನೋಡಿ, ಪ್ರೇಕ್ಷಕರ ಮಸ್ತ್ ಎಂಜಾಯ್ ಮಾಡಬಹುದು.
