
ಹಾಸನ: ಹಿಜಬ್ ವಿಚಾರ ಬಂದಾಗ ಯಾಕೆ ಜಮೀರ್ ಹೊರಗೆ ಬಂದು ಮಾತನಾಡಲಿಲ್ಲ. ಯಾಕೆ ಡಿ.ಕೆ ಶಿವಕುಮಾರ್ (DK Shivakumar) ಮಾತಾಡಲಿಲ್ಲ, ಸಿದ್ದರಾಮಯ್ಯ ಯಾಕೆ ಮೌನಾಚರಣೆ ಮಾಡಿದ್ರು ಎಂದು ಶಾಸಕ ಜಮೀರ್ ಅಹಮ್ಮದ್ (Zameer Ahmed) ಹೇಳಿಕೆಗೆ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ತಿರುಗೇಟು ನೀಡಿದರು.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಹಿಜಬ್ ವಿಚಾರ ಬಂದಾಗ ಕುಮಾರಣ್ಣ ವಿಧಾನಸೌಧದಲ್ಲಿ ಮಾತಾನಾಡಿದರು. ಆ 3 ತಿಂಗಳು ಮುಸಲ್ಮಾನ್ ಜನಾಂಗ ಏನು ಪರದಾಟದಲ್ಲಿ ಇದ್ದರು. ಅಂತಹ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಕೈಹಿಡಿದಿದ್ದರು. ಹಾಗಾಗಿ ಈ ಬಗ್ಗೆ ಚರ್ಚೆ ಮಾಡುವುದೇ ಬೇಡ. ಇದು ಜನರಿಗೆ ಗೊತ್ತಾಗಿದೆ. ಯಾರು ನಿಜವಾಗಿ ನಮ್ಮ ಸಹಾಯಕ್ಕೆ ಬರುತ್ತಾರೆ ಯಾರು ಡೋಂಗಿ ನಾಟಕ ಆಡುತ್ತಿದ್ದಾರೆ ಅಂತಾ ಗೊತ್ತಾಗಿದೆ. ಹಾಗಾಗಿ ಇದೆಲ್ಲ ಚರ್ಚೆ ಮಾಡಿದರೇ ಬೆಲೆ ಸಿಗಲ್ಲ. ಜಮೀರ್ ಅವರು ಇದೆಲ್ಲ ಮಾತಾಡುವುದನ್ನು ನಿಲ್ಲಿಸಿ, ತಮ್ಮ ಪಕ್ಷದ ಯೋಜನೆ ಮುಂದಿಟ್ಟು ಚುನಾವಣೆ ಮಾಡಲಿ ಎಂದು ಹೇಳಿದರು.
ಕಳೆದ ಬಾರಿ ಕೂಡ ಹಾಗೆ ಎ ಟೀಂ, ಬಿ ಟೀಂ ಅಂದಿದ್ರು. ಕಳೆದ ಬಾರಿ ನಾವು ಕಾಂಗ್ರೆಸ್ ಜೊತೆನೇ ಸರ್ಕಾರ ಮಾಡಿಕೊಂಡಿದ್ದೆವು. ಈ ಸಾರಿ ಮುಸಲ್ಮಾನ್ ಜನಾಂಗ ಇದನ್ನು ನಂಬಲು ತಯಾರಿಲ್ಲ. ಇವರೇನಿದ್ರು ಸುಮ್ಮನೇ ಡಂಗೂರ ಹೊಡಿಯಬೇಕು ಅಷ್ಟೇ. ಈ ಬಾರಿ ಅವರಿಗೂ ಗೊತ್ತಾಗಿ ಬಿಟ್ಟಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಟ್ರೈ ಆ್ಯಂಗಲ್ ಫೈಟ್ನಲ್ಲಿ ಇದ್ದೀವಿ, ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ತಯಾರಿಲ್ಲ. ರಾಜ್ಯದ ಜನ ಉಳಿಯಬೇಕು, ರಾಜ್ಯದ ಏಕೈಕ ಪ್ರಾದೇಶಿಕ ಪಕ್ಷ ಉಳಿಯಬೇಕು. ಪ್ರಾದೇಶಿಕ ಪಕ್ಷ ಉಳಿದರೆ ಮಾತ್ರ ರಾಜ್ಯದ ಸಮಸ್ಯೆ ಬಗೆಹರಿಸಲು ಸಾಧ್ಯ. ಎರಡು ರಾಷ್ಟ್ರೀಯ ಪಕ್ಷಗಳನ್ನು ದೂರ ಇಡಲು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಜಿಎಸ್ಟಿ ಹಣ ಬಿಡುಗಡೆ ಮಾಡಿರುವ ಲಿಸ್ಟ್ ತೆಗೆದ್ರು ನಾವು ಇವತ್ತು ಯಾವ ಸ್ಥಾನದಲ್ಲಿದ್ದೇವೆ. ಇವತ್ತು ಗುಜರಾತ್ ಮೊದಲೇ ಸ್ಥಾನದಲ್ಲಿದೆ. ಎಲ್ಲಾ ಉತ್ತರ ಭಾರತದ ರಾಜ್ಯಗಳಿಗೆ ಕೊಡುತ್ತಾರೆ. ನಾವೇನು ಮಾಡಿದ್ದೀವಿ, ರಾಜ್ಯದಿಂದ 26 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ನಮಗೆ ಕೊಟ್ಟಂತಹ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಈಗ ಚುನಾವಣೆ ಬಂದಿದೆ ಅಂತ ಮೊನ್ನೆ ಭದ್ರ ಮೇಲ್ದಂಡೆ ಯೋಜನೆಗೆ 5,000 ಇಟ್ಟಿದ್ದಾರೆ. ಅದು ಅನುಷ್ಠಾನ ಆಗುವುದು ಯಾವಾಗ, ಬಜೆಟ್ನಲ್ಲಿ ಇಟ್ಟ ಹಣ ಬಿಡುಗಡೆ ಆಗುವುದು ಯಾವಾಗ? ಚುನಾವಣೆ ಹತ್ತಿರ ಬಂತು ಇವೆಲ್ಲಾ ಯೋಜನೆ ಘೋಷಣೆ ಮಾಡುತ್ತಿದ್ದಾರೆ. ಮಧ್ಯ ಕರ್ನಾಟಕಕ್ಕೆ ಮಾತ್ರ ಯೋಜನೆ ಕೊಟ್ಟಿದ್ದಾರೆ. ದಕ್ಷಿಣ, ಉತ್ತರ ಕರ್ನಾಟಕಕ್ಕೆ ಏನು ಯೋಜನೆ ಕೊಟ್ಟಿದ್ದಾರೆ, ಏನು ಕೊಟ್ಟಿಲ್ಲ. ಕೇಂದ್ರ, ರಾಜ್ಯ ಸರ್ಕಾರಕ್ಕೆ ಕರ್ನಾಟಕದ ಮೇಲೆ ಅವರಿಗೆ ಆಸಕ್ತಿ, ಆಸೆ ಇಲ್ಲ. ಅವತ್ತು ಆಕ್ಸಿಜನ್ ಕೊಡಲಿಲ್ಲ, ಸುಪ್ರೀಂಕೋರ್ಟ್, ಹೈಕೋರ್ಟ್ನಿಂದ ಆದೇಶ ಮಾಡಿಕೊಂಡು ಬರಬೇಕಿತ್ತು. ಕೇಂದ್ರ ಸರ್ಕಾರದವರು ಕಿಂಚಿತ್ತು ವಿಶ್ವಾಸ ತೋರಿಸಲಿಲ್ಲ. ಈ ಸರ್ಕಾರ ಬೆಲೆ ಕಳೆದುಕೊಂಡಿದೆ, ಕೇಂದ್ರ ಸರ್ಕಾರದ ಮಾತು ಇನ್ಮುಂದೆ ನಡೆಯಲ್ಲ. ಖಂಡಿತವಾಗಿಯೂ ಕರ್ನಾಟಕದ ಜನ ಬಿಜೆಪಿಯನ್ನು ಸೋಲಿಸಿ ಮನೆಗೆ ಕಳಿಹಿಸುತ್ತಾರೆ ಎಂದು ಭವಿಷ್ಯ ನುಡಿದರು.