
ಬೆಂಗಳೂರು (ಫೆ.03): ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಜ್ಯ ನಾಯಕರು ಮುಂದಿನ ಚುನಾವಣೆಗೆ ಸರಣಿ ಭರವಸೆಗಳನ್ನು ಘೋಷಣೆ ಮಾಡುತ್ತಿರುವುದರಿಂದ ಅಸಮಾಧಾನಗೊಂಡಿದ್ದ ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು 10 ದಿನದ ಹಿಂದೆಯೇ ಸಮಿತಿಗೆ ರಾಜೀನಾಮೆ ನೀಡಿದ್ದರು ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಅಸಮಾಧಾನಗೊಂಡಿದ್ದ ಪರಮೇಶ್ವರ್ ಅವರನ್ನು ಸಮಾಧಾನಪಡಿಸಲು ರಾಜ್ಯ ಉಸ್ತುವಾರಿ ಸುರ್ಜೇವಾಲಾ ಬುಧವಾರ ಅವರ ನಿವಾಸಕ್ಕೆ ತೆರಳಿ ಸುದೀರ್ಘ ಮಾತುಕತೆ ನಡೆಸಿದ್ದರು. ಇಷ್ಟಾಗಿಯೂ ಬೇಸರ ಸಂಪೂರ್ಣವಾಗಿ ಮಾಯವಾದಂತಿಲ್ಲ. ಹೀಗಾಗಿಯೇ ಶುಕ್ರವಾರ ಕೋಲಾರದ ಕುರುಡುಮಲೆಯಿಂದ ಚಾಲನೆ ಪಡೆಯಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಯಾತ್ರೆಯಲ್ಲಿ ಪರಮೇಶ್ವರ್ ಭಾಗಿಯಾಗುವರೇ ಎಂಬುದು ಕಡೆ ಕ್ಷಣದವರೆಗೂ ಖಾತರಿಯಾಗಿಲ್ಲ.
ರಾಜ್ಯ ನಾಯಕರು ಸತತವಾಗಿ ಪ್ರಣಾಳಿಕೆಯ ಮುಖ್ಯಾಂಶಗಳಲ್ಲಿ ತಮ್ಮನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ ಘೋಷಣೆ ಮಾಡುತ್ತಿರುವ ಬಗ್ಗೆ ಪರಮೇಶ್ವರ್ ಅಸಮಾಧಾನಗೊಂಡಿದ್ದರು. ಇದು ವಿಕೋಪಕ್ಕೆ ಹೋಗಿದ್ದು 10 ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪಕ್ಷದ ಕರಾವಳಿ ಪ್ಯಾಕೇಜ್ ಘೋಷಣೆಗೊಂಡ ಸಂದರ್ಭದಲ್ಲಿ. ಕರಾವಳಿ ಭಾಗದ ಪ್ರಣಾಳಿಕೆಯ ಹತ್ತು ಅಂಶಗಳನ್ನು ಸದರಿ ಕಾರ್ಯಕ್ರಮದಲ್ಲಿ ಬಿ.ಕೆ.ಹರಿಪ್ರಸಾದ್ ಘೋಷಣೆ ಮಾಡಿದ್ದರು. ಇದರಿಂದ ಅಸಮಾಧಾನಗೊಂಡ ಪರಮೇಶ್ವರ್ ಅಂದು ಸಂಜೆಯೇ ಹೈಕಮಾಂಡ್ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.