
ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ನೀಡಲಾಗುವ ಸಮವಸ್ತ್ರದಲ್ಲಿ ಮಲತಾಯಿ ಧೋರಣೆ ನಡೆಸಲಾಗುತ್ತಿರುವ ಬಗ್ಗೆ ಕರ್ನಾಟಕ ಸರ್ಕಾರ (Karnataka Govt) ಮತ್ತು ಅಧಿಕಾರಿಗಳ ವಿರುದ್ಧ ಗರಂ ಆದ (Karnataka High Court), ಹೈ ಕೋರ್ಟ್ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಉತ್ಸವಗಳನ್ನು ನಡೆಸಲಾಗುತ್ತದೆ, ಸರ್ಕಾರಿ ಶಾಲೆ (Karnataka Govt Schools) ಮಕ್ಕಳಿಗೆ ಸಮವಸ್ತ್ರ ನೀಡಲು ಆಗುದಿಲ್ವಾ? ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ನಾಚಿಕೆಯಾಗಬೇಕು ಎಂದು ಛೀಮಾರಿ ಹಾಕಿದೆ. ಸರ್ಕಾರಿ ಮಕ್ಕಳಿಗೆ ಎರಡು ಜತೆ ಸಮವಸ್ತ್ರ, 1 ಜತೆ ಶೂ ಹಾಗೂ ಎರಡು ಜತೆ ಸಾಕ್ಸ್ ನೀಡುವಂತೆ ಹೈಕೋರ್ಟ್ 2018ರಲ್ಲಿ ಆದೇಶ ಹೊರಡಿಸಿತ್ತು. ಆದರೆ ಸರ್ಕಾರ ಈ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಎಂದು ಆರೋಪಿ ಕೊಪ್ಪಳದ ಮಾ.ಮಂಜುನಾಥ್ ಎಂಬವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಕೇವಲ ಒಂದು ಜೊತೆ ಸಮವಸ್ತ್ರ ನೀಡಲಾಗುತ್ತಿದೆ ಎಂದು ಆರೋಪಿಸಿ ಮಂಜುನಾಥ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾ. ಬಿ.ವೀರಪ್ಪ, ನ್ಯಾ. ಕೆ.ಎಸ್.ಹೇಮಲೇಖಾ ಅವರಿದ್ದ ದ್ವೀಸದಸ್ಯ ಪೀಠ, ಎರಡು ಸಮವಸ್ತ್ರ ನೀಡದೆ ಕೇವಲ ಒಂದು ಜತೆ ಸಮವಸ್ತ್ರ ನೀಡುತ್ತಿರುವ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಎರಡು ವಾರದಲ್ಲಿ ಆದೇಶ ಪಾಲಿಸುವಂತೆ ಸೂಚನೆ ನೀಡಿದೆ.
ಉತ್ಸವ ನಡೆಸಲು ಕೋಟ್ಯಂತರ ಹಣ ಖರ್ಚು ಮಾಡಲಾಗುತ್ತದೆ. ಆದರೆ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ನೀಡುತ್ತಿಲ್ಲ. ರಾಜ್ಯ ಸರ್ಕಾರ, ಅಧಿಕಾರಿಗಳಿಗೆ ನಿಜಕ್ಕೂ ನಾಚಿಕೆಯಾಗಬೇಕು. ಅಧಿಕಾರಿಗಳಿಗೆ ಮರ್ಯಾದೆ, ಆತ್ಮಸಾಕ್ಷಿ ಇಲ್ಲ. ಅವರು ಸರ್ಕಾರಿ ಶಾಲಾ ಮಕ್ಕಳಿಗೆ ಮಾನವೀಯತೆ ತೋರುತ್ತಿಲ್ಲ. ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಗೆ ಹೋಗುವುದಿಲ್ಲ. ಖಾಸಗಿ ಶಾಲೆಗೆ ಕಾರಿನಲ್ಲಿ ಹೋಗಿ ಬರುತ್ತಾರೆ. ಮಕ್ಕಳ ವಿಚಾರದಲ್ಲಿ ಇಂತಹ ಮಲತಾಯಿ ಧೋರಣೆಯನ್ನು ಸಹಿಸುವುದಿಲ್ಲ. ಸರ್ಕಾರ ಈಗಲಾದರೂ ಕಣ್ಣು ತೆರೆದು ಎರಡು ಜತೆ ಸಮವಸ್ತ್ರ ಒದಗಿಸಬೇಕು ಎಂದು ಸೂಚಿಸಿತು.