
ಫಾಝಿಲ್ ಕೊಲೆಯ ಸೂತ್ರಧಾರ ಶರಣ್ ಪಂಪ್‌ವೆಲ್‌ನನ್ನು UAPA ಕಾಯ್ದೆಯಡಿ ಬಂಧಿಸಿ
ಶಾಹುಲ್ ಹಮೀದ್ ಕೆ ಕೆ ಆಗ್ರಹ
2022ರ ಜುಲೈ 28ರಂದು ಸುರತ್ಕಲ್‌ನಲ್ಲಿ ನಡೆದ ಫಾಝಿಲ್ ಹತ್ಯೆಯ ಹಿಂದೆ ಹಿಂದುತ್ವ ಸಂಘಟನೆಯೊಂದರ ಕೈವಾಡ ಇರುವ ಶಂಕೆ ವ್ಯಕ್ತಪಡಿಸಿದ್ದ ದಕ್ಷಿಣ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ, ಫಾಝಿಲ್ ಹತ್ಯೆಯ ಸೂತ್ರಧಾರರನ್ನೂ ಕೂಡ UAPA ಕಾಯ್ದೆಯಡಿ ಬಂಧಿಸುವಂತೆ ಆಗ್ರಹಿಸಿತ್ತು. ಈ ಸಂಬಂಧ ಹೋರಾಟ ಕೂಡ ಸಂಘಟಿಸಿತ್ತು.

ಆದರೆ ಪೊಲೀಸರು ಕೇವಲ ಫಾಝಿಲ್ ಹತ್ಯೆಯ ಕಾಲಾಳುಗಳನ್ನು ಬಂಧಿಸಿ ಕೈತೊಳೆದುಕೊಂಡಿದ್ದರು. ಫಾಝಿಲ್ ಹತ್ಯೆಯ ಸೂತ್ರಧಾರರನ್ನು ಬಂಧಿಸಿರಲಿಲ್ಲ. ಇದೀಗ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಅವರು ಫಾಝಿಲ್ ಹತ್ಯೆಯನ್ನು ಸಮರ್ಥಿಸಿಕೊಂಡು ಮಾತನಾಡಿದ್ದಾರೆ. ಅಮಾಯಕ ಫಾಝಿಲ್ ಹತ್ಯೆಯನ್ನು ಧೈರ್ಯ ಶೌರ್ಯ ಸಾಹಸ ಎಂದು ಬಣ್ಣಿಸಿದ್ದಾರೆ. ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ, ಸುರತ್ಕಲ್‌ಗೆ ನುಗ್ಗಿ ಫಾಝಿಲ್ ಅವರನ್ನು ಕೊಂದಿರುವುದಾಗಿ ತಮ್ಮ ಬಹಿರಂಗ ಭಾಷಣದಲ್ಲಿ ಹೇಳಿಕೊಂಡಿದ್ದಾರೆ.
ಬೆಳ್ಳಾರೆಯ ಪ್ರವೀಣ್ ಹತ್ಯೆಗೂ ಮಂಗಳಪೇಟೆಯ ಫಾಝಿಲ್ ಅವರಿಗೆ ಏನೇನೂ ಸಂಬಂಧ ಇರಲಿಲ್ಲ. ಹೀಗಿದ್ದರೂ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್ ಅವರನ್ನು ಕೊಲೆ ಮಾಡಿರುವುದಾಗಿ ಶರಣ್ ಪಂಪ್‌ವೆಲ್ ಒಪ್ಪಿಕೊಂಡಿದ್ದಾರೆ. ಪ್ರವೀಣ್ ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್ ಹತ್ಯೆ ನಡೆದಿದೆ ಎಂದು ಇಷ್ಟೊಂದು ಕರಾರುವಕ್ಕಾಗಿ ಹೇಳುವ ಶರಣ್ ಪಂಪ್ವೆಲ್ ಅವರೇ ಈ ಕೊಲೆಯ ಪ್ರಧಾನ ಸೂತ್ರಧಾರ ಆಗಿರಬಹುದು ಎಂಬ ಅನುಮಾನ ಇದೆ. ಶರಣ್ ಪಂಪ್ವೆಲ್ ಅವರೇ ಸುಪಾರಿ ಕೊಟ್ಟು ಫಾಝಿಲ್ ಹತ್ಯೆ ಮಾಡಿಸಿರಬಹುದು ಎಂಬ ಶಂಕೆ ಇದೆ.
ಅಮಾಯಕ ಫಾಝಿಲ್ ಹತ್ಯೆಯನ್ನು ನಮ್ಮತಾಕತ್ತು, ಎದೆಗಾರಿಕೆ ಎಂದು ಹೇಳಿಕೊಂಡಿರುವ ಶರಣ್ ಪಂಪ್ವೆಲ್ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು, UAPA ಕಾಯ್ದೆಯಡಿ ಶರಣ್ ಪಂಪ್‌ವೆಲ್ ಅವರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಕೆ.ಕೆ ಶಾಹುಲ್ ಹಮೀದ್ ಅವರು ಒತ್ತಾಯಿಸಿದ್ದಾರೆ.