
ಬೆಂಗಳೂರು: ನಗರದಲ್ಲಿ ಅತಿ ವೇಗದಿಂದ ಬಂದ ಖಾಸಗಿ ಬಸ್ (Bus), ನಿಲ್ಲಿಸಿದ್ದ ಸ್ಕೂಟರ್‌ಗೆ (Scooter) ಗುದ್ದಿದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಯುವತಿ (Woman) ಸಾವನ್ನಪ್ಪಿದ್ದಾಳೆ. ಯುವತಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಸ್ಥಳೀಯರು ಮಾನವೀಯತೆ ಮರೆತಿದ್ದಾರೆ.
ಬೆಂಗಳೂರಿನ (Bengaluru) ಯಶವಂತಪುರದ (Yeswanthpur) ಆರ್‌ಎಂಸಿ ಬಳಿ ಘಟನೆ ನಡೆದಿದೆ. ನೆಲಮಂಗಲದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಆಕೆಯ ಫೋನ್ ರಿಂಗ್ ಆಗಿದೆ. ತಕ್ಷಣ ಆಕೆ ಗಾಡಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಫೋನ್ ಕರೆಯನ್ನು ಸ್ವೀಕರಿಸಿದ್ದಾಳೆ.

ಅಷ್ಟರಲ್ಲಿ ಅತಿ ವೇಗದಿಂದ ಬಂದ ಖಾಸಗಿ ಬಸ್, ಆಕೆಗೆ ಗುದ್ದಿದೆ. ಆಕೆ ಹೆಲ್ಮೆಟ್ ಕೂಡಾ ತೆಗೆದಿದ್ದಳು. ಯುವತಿ ಕೆಳಗೆ ಬಿದ್ದಾಗ ಆಕೆಯ ತಲೆಯ ಮೇಲೆ ಬಸ್ ಚಕ್ರ ಹರಿದು ಹೋಗಿದೆ. ಇದರಿಂದ ಆಕೆಗೆ ಗಂಭೀರ ಗಾಯವಾಗಿದೆ.
ಯುವತಿ ರಕ್ತದ ಮಡುವಿನಲ್ಲಿ ನರಳಾಡುತ್ತಾ ಬಿದ್ದಿದ್ದರೂ ಸ್ಥಳೀಯರು ಮೊಬೈಲ್ ವೀಡಿಯೋ ಸೆರೆಹಿಡಿಯುವಲ್ಲಿ ಬ್ಯುಸಿಯಾಗಿದ್ದರು. ಯಾರೊಬ್ಬರೂ ಆಕೆಯನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿರಲಿಲ್ಲ.
ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಅಂಬುಲೆನ್ಸ್ ವ್ಯವಸ್ಥೆ ಮಾಡುವಷ್ಟರಲ್ಲಿ ಯುವತಿಯ ಪ್ರಾಣಪಕ್ಷಿ ಹಾರಿಹೋಗಿದೆ. ಅತಿ ವೇಗದಿಂದ ಬಂದ ಬಸ್ ಚಾಲಕ ಬಸ್ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.