
ವಾಷಿಂಗ್ಟನ್: ಅಮೆರಿಕದಲ್ಲಿ (America) ಗುಂಡಿನ ದಾಳಿಯ ಪ್ರಕರಣಗಳು ಒಂದಾದಮೇಲೊಂದರಂತೆ ವರದಿಯಾಗುತ್ತಲೇ ಇವೆ. ಮಂಗಳವಾರ ಕ್ಯಾಲಿಫೋರ್ನಿಯಾದಲ್ಲಿ (California) ಮತ್ತೆ ಗುಂಡಿನ ದಾಳಿಗಳು (Shooting) ನಡೆದಿವೆ. ಹಾಫ್ ಮೂನ್ ಬೇ (Half Moon Bay) ನಗರದಲ್ಲಿ ನಡೆದ 2 ಪ್ರತ್ಯೇಕ ದಾಳಿಗಳಲ್ಲಿ 7 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
ಗುಂಡಿನ ದಾಳಿ ನಡೆದಿರುವ ನಿಖರವಾದ ಸ್ಥಳಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ. ಪೊಲೀಸರು ಈಗಾಗಲೇ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಆತನನ್ನು ಝಾವೋ ಚುನ್ಲಿ (67) ಎಂದು ಗುರುತಿಸಲಾಗಿದೆ. ಆತ ಗುಂಡಿನ ದಾಳಿ ನಡೆಸಿ, ಪರಾರಿಯಾಗಲು ಪ್ರಯತ್ನಿಸುತ್ತಿದ್ದ ವೇಳೆ ಅಧಿಕಾರಿಗಳು ಆತನನ್ನು ಹಿಡಿದು ಬಂಧಿಸಿದ್ದಾರೆ.
ಆರೋಪಿಯನ್ನು ಅಧಿಕಾರಿಗಳು ಬಂಧಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಸದ್ಯ ಸಮುದಾಯದಲ್ಲಿ ಯಾವುದೇ ದಾಳಿಯ ಬೆದರಿಕೆಯಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಕೇವಲ 2 ದಿನಗಳ ಹಿಂದೆ ಕ್ಯಾಲಿಫೋರ್ನಿಯಾದ ಮಾಂಟೆರಿ ಪಾರ್ಕ್‌ನಲ್ಲಿ ಚೀನೀಯರ ಹೊಸ ವರ್ಷದ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ 10 ಜನರನ್ನು ಕೊಂದಿದ್ದ. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಹಿಡಿಯಲು ಕಾರ್ಯಾಚರಣೆ ನಡೆಸಿದ್ದರು. ಆತ ತನ್ನ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಪೊಲೀಸರ ವಾಹನಗಳು ಆತನ ವಾನಕ್ಕೆ ಸುತ್ತುವರಿದಿದ್ದವು. ಈ ವೇಳೆ ದಾಳಿಕೋರ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
