
ಮೃತ ಪೊಲೀಸ್ ಸಿಬ್ಬಂದಿ ಕುಟುಂಬಕ್ಕೂ 1 ಲಕ್ಷ ರೂ. ಚೆಕ್ ವಿತರಣೆ
ಮಂಗಳೂರು: ಇತ್ತೀಚೆಗೆ ಸುರತ್ಕಲ್‍ನ ಕಾಟಿಪಳ್ಳದಲ್ಲಿ ಹತ್ಯೆಗೀಡಾದ ಜಲೀಲ್ (Jaleel) ಮನೆಗೆ ಭೇಟಿ ನೀಡಿದ ಕಾಂಗ್ರೆಸ್ (Congress) ಮುಖಂಡ ಪ್ರಿಯಾಂಕ್ ಖರ್ಗೆ (Priyank Kharge) ಮಾಜಿ ಶಾಸಕ ಬಿ.ಎ. ಮೊಯಿದೀನ್ ಬಾವಾ (Mohiuddin Bava) ಅವರು ವೈಯಕ್ತಿಕ ನೆಲೆಯಲ್ಲಿ ನೀಡಿದ 1 ಲಕ್ಷ ರೂ. ಮೊತ್ತದ ಚೆಕ್ ಹಸ್ತಾಂತರಿಸಿ ಸಾಂತ್ವನ ಹೇಳಿದರು.

ಸುರತ್ಕಲ್ತ್ ನಲ್ಲಿ ನಡೆಯುತ್ತಿರುವ ಹತ್ಯೆ ಬಗ್ಗೆ ಪ್ರಿಯಾಂಕ್‍ಗೆ ಕೂಲಂಕಷ ವಿವರಣೆ ನೀಡಿದ ಮೊಯ್ದೀನ್ ಬಾವಾ ಹತ್ಯೆ ಆರೋಪಿಗಳು ಮೂರೇ ತಿಂಗಳಲ್ಲಿ ಜಾಮೀನು ಪಡೆದು ಹೊರಬಂದಿದ್ದಾರೆ. ಇದಕ್ಕೆ ಬಿಜೆಪಿ ಸರ್ಕಾರವೇ ಕಾರಣ ಎಂದು ಆರೋಪಿಸಿದರು. ಮುಂದೆ ನಮ್ಮ ಸರ್ಕಾರ ಬರಲಿದೆ ಇಂತಹ ಅಮಾನುಷ ಹತ್ಯೆಗಳಿಗೆ ನಮ್ಮ ಸರ್ಕಾರ ಇತಿಶ್ರೀ ಹಾಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೃತ ಜಲೀಲ್ ತಂದೆ ಇಂತಹಾ ಘಟನೆಗಳು ಮತ್ತೆ ಮರುಕಳಿಸಬಾರದು. ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.

ಪೊಲೀಸ್ ಸಿಬ್ಬಂದಿ ಕುಟುಂಬಕ್ಕೂ ಚೆಕ್ ವಿತರಣೆ:
ಕಾವೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತ ಪೊಲೀಸ್ ಸಿಬ್ಬಂದಿ ಕುಟುಂಬಕ್ಕೂ ಪ್ರಿಯಾಂಕ್ ಖರ್ಗೆ 1 ಲಕ್ಷ ರೂ. ಚೆಕ್ ವಿತರಿಸಿದರು.
ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಇತ್ತೀಚಿಗೆ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಪೊಲೀಸ್ ಕಾನ್‍ಸ್ಟೇಬಲ್ ಹನುಮಂತ ಅವರ ಕುಟುಂಬಕ್ಕೆ ಮಾಜಿ ಶಾಸಕ ಬಿ.ಎ. ಮೊಯಿದೀನ್ ಬಾವಾ ಅವರು ವೈಯಕ್ತಿಕ ನೆಲೆಯಲ್ಲಿ ನೀಡಿದ 1 ಲಕ್ಷ ರೂ. ಮೊತ್ತದ ಚೆಕ್ ಹಸ್ತಾಂತರಿಸಿದರು. ಪಣಂಬೂರು ಪೊಲೀಸ್ ಕ್ವಾಟ್ರಸ್‍ನಲ್ಲಿ ವಾಸವಿದ್ದ ಬಾಗಲಕೋಟೆ ಮೂಲದ ಹನುಮಂತ ಅವರು ಕಾವೂರು ಠಾಣೆಯಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಮೃತರಾಗಿದ್ದರು.
ಚೆಕ್ ವಿತರಣೆ ಸಂದರ್ಭ ಖರ್ಗೆ ಜೊತೆ ಮಾಜಿ ಶಾಸಕ ಮೊಯಿದೀನ್ ಬಾವಾ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಾಂಬಳಿ, ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಹ್ಯಾರಿಸ್ ಬೈಕಂಪಾಡಿ, ಷರೀಫ್ ಚೊಕ್ಕಬೆಟ್ಟು, ಜಲೀಲ್ ಬದ್ರಿಯ, ಎಸ್‌ಸಿಎಸ್‌ಟಿ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಕೋಡಿಕಲ್, ಅಬೂಬಕರ್ ಪ್ಯಾರಡೈಸ್, ಪ್ರಹ್ಲಾದ್ ಮತ್ತಿತರರು ಉಪಸ್ಥಿತರಿದ್ದರು.