
ಬ್ಯಾನರ್ ತೆರವುಗೊಳಿಸಿದ ಪೊಲೀಸರು
ಮಂಗಳೂರು: ಕರಾವಳಿಯಲ್ಲಿ ಇದೀಗ ಎಲ್ಲೆಡೆ ಜಾತ್ರೆಯ ಸಂಭ್ರಮ. ದೇವಸ್ಥಾನ, ದೈವಸ್ಥಾನಗಳ ವಾರ್ಷಿಕ ಜಾತ್ರೋತ್ಸವದ ಸಡಗರ. ಈ ನಡುವೆ ಪ್ರತೀ ಜಾತ್ರೆಯಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ (Muslim Traders) ಬಹಿಷ್ಕಾರ (Boycott) ಹಾಕಲಾಗುತ್ತಿದೆ.
ಹಿಂದೂಗಳ ಕ್ಷೇತ್ರದಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದೆಂದು ವಿಶ್ವ ಹಿಂದೂ ಪರಿಷತ್, ಭಜರಂಗದಳ ಎಲ್ಲೆಡೆ ಬ್ಯಾನರ್ಗಳನ್ನು ಹಾಕಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುತ್ತಿದ್ದಾರೆ. ಈ ವರ್ಷವೂ ಹಲವೆಡೆ ಈ ಅಭಿಯಾನ ನಡೆದಿದ್ದು, ಜ.19ರಂದು ಮಂಗಳೂರು ನಗರದ ಕದ್ರಿ ಶ್ರೀಮಂಜುನಾಥ ದೇವಸ್ಥಾನದ ಜಾತ್ರೆಯಲ್ಲೂ ಬ್ಯಾನರ್ (Banner) ಕಾಣಿಸಿಕೊಂಡಿದೆ.
ಜ.21 ರವರೆಗೆ ನಡೆಯಲಿರುವ ಕದ್ರಿ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ವಿಎಚ್ಪಿ-ಭಜರಂಗದಳ ಬ್ಯಾನರ್ ಹಾಕಿದೆ. ಅದರಲ್ಲಿ ಕುಕ್ಕರ್ ಬಾಂಬ್ ಸ್ಫೋಟವನ್ನೂ ಉಲ್ಲೇಖ ಮಾಡಲಾಗಿದೆ. ವಿಗ್ರಹಾರಾಧನೆ ಹರಾಂ ಎಂದು ನಂಬಿರುವ ಯಾರಿಗೂ ಈ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ. ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಯಲ್ಲಿ ವಿಶ್ವಾಸವುಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಎಂದು ಬ್ಯಾನರ್ ಹಾಕಲಾಗಿದೆ. ಈ ಬ್ಯಾನರ್ ಹಾಕಿರೋದನ್ನು ಹಿಂದೂ ಸಂಘಟನೆಗಳು ಸಮರ್ಥಿಸಿಕೊಂಡಿದೆ.

ಈ ದೇವಸ್ಥಾನದ ಜಾತ್ರಾ ಸಂದರ್ಭದಲ್ಲಿ ಹಲವು ವರ್ಷಗಳಿಂದಲೂ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದರು. ಆದ್ರೆ ಈ ಬಾರಿ ಎಲ್ಲೆಡೆ ಬಹಿಷ್ಕಾರಗಳು ಆರಂಭಗೊಂಡಿದ್ದರಿಂದ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರಕ್ಕೆ ಬಂದಿಲ್ಲ. ಒಂದೆರಡು ಮಂದಿ ಮುಸ್ಲಿಂ ವ್ಯಾಪಾರಿಗಳು ಜಾತ್ರೆಯಲ್ಲಿ ವ್ಯಾಪಾರ ನಡೆಸಲು ಬಂದಿದ್ದು, ಅವರನ್ನು ಹಿಂದೂ ಸಂಘಟನೆಗಳು ವಾಪಸ್ ಕಳುಹಿಸಿದ್ದಾರೆ. ಈ ಕ್ಷೇತ್ರ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಸ್ಥಾನವಾಗಿರೋದ್ರಿಂದ ಕ್ಷೇತ್ರದ ಆಡಳಿತ ಮಂಡಳಿಯೂ ಈ ಬ್ಯಾನರ್ ಅಳವಡಿಕೆಗೆ ಸಮ್ಮತಿ ಸೂಚಿಸಿಲ್ಲ. ಹೀಗಾಗಿ ಶಾಂತಿ ಸುವ್ಯವಸ್ಥೆ ಕಾಪಾಡೋ ನಿಟ್ಟಿನಲ್ಲಿ ಪೊಲೀಸರು ಬ್ಯಾನರ್ಅನ್ನು ತೆರವುಗೊಳಿಸಿದ್ದಾರೆ.
ಇಂದು ಬೆಳಗ್ಗೆ ಬ್ಯಾನರ್ ಹಾಕಿದ್ದ ಬಗ್ಗೆ ಪೊಲೀಸರ ಗಮನಕ್ಕೆ ಬಂದಿದ್ದು, ತಕ್ಷಣ ತೆರವುಗೊಳಿಸಿದ್ದಾರೆ. ಎರಡು ದಿನಗಳ ಕಾಲ ಜಾತ್ರೆ ಇರೋದ್ರಿಂದ ಆ ವೇಳೆ ಮುಸ್ಲಿಂ ವ್ಯಾಪಾರಿಗಳು ಬಂದ್ರೂ ಅವರನ್ನು ವಾಪಸ್ ಕಳುಹಿಸಲು ಹಿಂದೂ ಸಂಘಟನೆಯ ಕಾರ್ಯಕರ್ತರು ಮುಂದಾಗಿದ್ದಾರೆ. ಒಟ್ಟಿನಲ್ಲಿ ಕರಾವಳಿಯಲ್ಲಿನ ಜಾತ್ರೆಗಳಲ್ಲಿ ಸಾಮರಸ್ಯದೊಂದಿಗೆ ಎಲ್ಲರೂ ವ್ಯಾಪಾರ ನಡೆಸುತ್ತಿದ್ದು ಮುಂದಿನ ದಿನದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಮುಸ್ಲಿಂ ವರ್ತಕರ ವ್ಯಾಪಾರ ಸಂಪೂರ್ಣ ನಿಲ್ಲುವ ಸಾಧ್ಯತೆ ಇದೆ.