
ಬೆಳಗಾವಿ: ಸಿಡಿ ಇದ್ದರೇ ಇಟ್ಟುಕೊಂಡು ಕೂರಬಾರದು ಅದನ್ನು ಎಷ್ಟು ಬೇಗ ಆಗುತ್ತೇ, ಅಷ್ಟು ಬೇಗ ಬಹಿರಂಗ ಪಡಿಸಿ ಎಂದು ರಮೇಶ್ ಜಾರಕಿಹೊಳಿ (Ramesh Jarkiholi) ಸವಾಲು ಹಾಕಿದರು.
ನಗರದಲ್ಲಿ 17 ಶಾಸಕರ ಸಿಡಿ ಬಿಡುಗಡೆ ಮಾಡುತ್ತೇವೆ ಎಂಬ ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಡಲಿ ಬಿಡಿ, ಸಿಡಿಗಳನ್ನು ಇಟ್ಟುಕೊಂಡು ಕುರಬಾರದು. ಎಷ್ಟು ಬೇಗ ಆಗುತ್ತೆ ಅಷ್ಟು ಬೇಗ ಬಹಿರಂಗ ಪಡಿಸಬೇಕು. ಇಂತಹ ನೂರು ಸಿಡಿ ಬರಲಿ ಎಲ್ಲ ಶಾಸಕರು ಫೈಟ್ ಮಾಡಲು ಸಿದ್ಧರಿದ್ದಾರೆ. ಸಿಡಿ ಮಾಡಿ ಬ್ಲ್ಯಾಕ್ ಮೇಲ್ ಮಾಡುವವರಿಗೆ ರಾಜ್ಯದ ಜನ ಸರಿಯಾಗಿ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.
ಬಿ.ಕೆ ಹರಿಪ್ರಸಾದ್ (B.K. Hariprasad) 17 ಶಾಸಕರನ್ನು ವೇಶ್ಯೆಯರಿಗೆ ಹೋಲಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಕೆ ಹರಿಪ್ರಸಾದ್ ಈ ರೀತಿ ಮಾತನಾಡುವ ವ್ಯಕ್ತಿಯಲ್ಲ. ಏನೋ ತಪ್ಪಿ ಮಾತನಾಡಿರಬೇಕು. ನಾನು ಆ ಹೇಳಿಕೆಯನ್ನು ಪೂರ್ಣವಾಗಿ ನೋಡಿಲ್ಲ. ಆದರೆ ನನ್ನ ಮಿತ್ರರು ಈಗಾಗಲೇ ಈ ಹೇಳಿಕೆಗೆ ಉತ್ತರ ನೀಡಿದ್ದಾರೆ ಎಂದರು.
ಬಿಟ್ಟು ಹೋದ ಶಾಸಕರು ಕಾಂಗ್ರೆಸ್ಗೆ (Congress) ಬಂದರೆ ಸ್ವಾಗತ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ, ಉಳಿದವರ ಬಗ್ಗೆ ಗೊತ್ತಿಲ್ಲ. ನನಗೆ ಗೊತ್ತಿರುವ ಹಾಗೇ ಯಾರು ಬಿಜೆಪಿಯನ್ನು ಬಿಡುವುದಿಲ್ಲ. ಕಾಂಗ್ರೆಸ್ ಪರಿಸ್ಥಿತಿ ಏನಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ನಮ್ಮ ವರಿಷ್ಠರು ದಿಲ್ಲಿಯಿಂದ ಬಂದು ಕುಳಿತರೇ ಕಾಂಗ್ರೆಸ್ ಧೂಳಿಪಟ ಆಗುತ್ತದೆ. ಅದಕ್ಕೆ ಭವಿಷ್ಯ ಇಲ್ಲ, ಬಿಜೆಪಿಯನ್ನು ಇನ್ನೂ 20 ವರ್ಷ ಅಲುಗಾಡಿಸುವ ಶಕ್ತಿ ಯಾರಿಗೂ ಇಲ್ಲ. ಬಿಜೆಪಿಯಿಂದ (BJP) ರಾಜ್ಯಕ್ಕೆ ದೇಶಕ್ಕೆ ಹಿತ ಆಗುತ್ತದೆ ಎಂದು ಹೇಳಿದರು.