
ಘಟನೆ ವೇಳೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೂಡಾ ಇದ್ದರು ಎಂದು ವರದಿ ಉಲ್ಲೇಖಿಸಿದೆ
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ಅನುಮತಿಯಿಲ್ಲದೆ ತೆರೆದು ವಿಮಾನಯಾನ ನಿಮಯಗಳ ಗಂಭೀರ ಉಲ್ಲಂಘನೆ ಮಾಡಿರುವ ಬಗ್ಗೆ ವರದಿಯಾಗಿದೆ. ಶಿಕ್ಷಾರ್ಹ ಅಪರಾಧ ಎನಿಸಿಕೊಂಡ ಈ ಘಟನೆ ನಡೆದು ಒಂದು ತಿಂಗಳು ಕಳೆದ ನಂತರ ಇಂಡಿಗೋ ಏರ್‌ಲೈನ್ಸ್ ಇದೀಗ ಹೇಳಿಕೆ ಬಿಡುಗಡೆ ಮಾಡಿದೆ. ಘಟನೆಯನ್ನು ‘ಆಕಸ್ಮಿಕ’ ಎಂದು ಇಂಡಿಗೋ ಹೇಳಿದೆಯಾದರೂ, ಆರೋಪಿಯ ಹೆಸರನ್ನು ಉಲ್ಲೇಖಿಸಿಲ್ಲ.
ಡಿಸೆಂಬರ್ 10 ರಂದು ಚೆನ್ನೈಯಿಂದ ತಿರುಚ್ಚಿಗೆ ಹೊರಟಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಈ ಘಟನೆ ನಡೆದಿದೆ. ಈ ವೇಳೆ ತೇಜಸ್ವಿ ಸೂರ್ಯ ‘ಏರ್‌ಕ್ರಾಫ್ಟ್ ನಿಯಮ ಕಾಯ್ದೆ-1937’ ಅನ್ನು ಉಲ್ಲಂಘಿಸಿದ್ದಾರೆ ಎಂದು ವರದಿಯಾಗಿದೆ.
ಇಂಡಿಗೋ ನೀಡಿರುವ ಹೇಳಿಕೆಯಲ್ಲಿ,“ಡಿಸೆಂಬರ್ 10 ರಂದು ಚೆನ್ನೈನಿಂದ ತಿರುಚಿರಾಪಳ್ಳಿಗೆ 6E 7339 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು, ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಆಕಸ್ಮಿಕವಾಗಿ ತುರ್ತು ನಿರ್ಗಮನವನ್ನು ತೆರೆದರು. ಈ ಪ್ರಯಾಣಿಕ ತನ್ನ ನಡೆಗಾಗಿ ಕ್ಷಮೆಯಾಚಿಸಿದ್ದಾರೆ. ಹೀಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ ಪ್ರಕಾರ, ವಿಮಾನವು ಕಡ್ಡಾಯ ಎಂಜಿನಿಯರಿಂಗ್ ತಪಾಸಣೆಗೆ ಒಳಗಾಯಿತು. ಇದು ನಿರ್ಗಮನ ವಿಳಂಬಕ್ಕೆ ಕಾರಣವಾಯಿತು” ಎಂದು ಹೇಳಿದೆ.
ತಮಿಳುನಾಡು ವಿದ್ಯುತ್ ಸಚಿವ ವಿ. ಸೆಂಥಿಲ್ ಬಾಲಾಜಿ ಅವರು ಡಿಸೆಂಬರ್ 29, 2022 ರಂದು ಚೆನ್ನೈ-ತಿರುಚಿನಾಪಳ್ಳಿ ವಿಮಾನದಲ್ಲಿ ತುರ್ತು ನಿರ್ಗಮನ ಬಾಗಿಲು ತೆಗೆದ ಬಗ್ಗೆ ಟ್ವೀಟ್ ಮಾಡಿ, ತೇಜಸ್ವಿ ಸೂರ್ಯ ಮತ್ತು ಬಿಜೆಪಿಯ ತಮಿಳುನಾಡು ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಸುಳಿವು ನೀಡಿದ್ದರು. ಈ ವೇಳೆ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆಯನ್ನು ಎಎನ್‌ಐ ವರದಿ ಮಾಡಿತ್ತಾದರೂ, ಅದು ತನ್ನ ವರದಿಯಲ್ಲಿ ತಪ್ಪೆಸಗಿದ ಪ್ರಯಾಣಿಕನ ಹೆಸರನ್ನು ಬಹಿರಂಗಪಡಿಸಿರಲಿಲ್ಲ.
ಇದರ ನಂತರ ಇಂಗ್ಲಿಷ್‌ನ ಖ್ಯಾತ ಸುದ್ದಿ ಮಾಧ್ಯಮ ದಿ ನ್ಯೂಸ್ ಮಿನಿಟ್ ಈ ಬಗ್ಗೆ ಜನವರಿ 17ರ ಮಂಗಳವಾರ ಸುಧೀರ್ಘ ವರದಿಯನ್ನು ಪ್ರಕಟಿಸಿದೆ. ಸುದ್ದಿಯೂ ವೈರಲ್ ಆಗುತ್ತಿದ್ದಂತೆ, ಆರಂಭದಲ್ಲಿ ಈ ಬಗ್ಗೆ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದ್ದ ಇಂಡಿಗೋ ಏರ್‌ಲೈನ್ಸ್ ಇದೀಗ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದೆ.
ತುರ್ತು ಬಾಗಿಲು ತೆರೆದ ಕಾರಣಕ್ಕೆ ವಿಮಾನದಲ್ಲಿದ್ದ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ, ನಂತರ ಸಂಪೂರ್ಣ ತಪಾಸಣೆಗೆ ಒಳಗಾಗಬೇಕಾಗಿತ್ತು. ಹೀಗಾಗಿ ವಿಮಾನವೂ ಪ್ರಯಾಣವೂ ಎರಡು ಗಂಟೆಗಳ ಕಾಲ ವಿಳಂಬವಾಗಿದೆ ಎಂದು ವರದಿಯಾಗಿದೆ.
ಅನುಮತಿಯಿಲ್ಲದೆ ತುರ್ತು ನಿರ್ಗಮನಗಳನ್ನು ತೆರೆದ ಪ್ರಯಾಣಿಕರ ವಿರುದ್ಧ ವಿಮಾನಯಾನ ಸಂಸ್ಥೆಯು ಪೊಲೀಸ್ ದೂರು ದಾಖಲಿಸಿರುವ ಘಟನೆ ಈ ಹಿಂದೆ ಹಲವು ಬಾರಿ ನಡೆದಿತ್ತು. ಆದರೆ ತೇಜಸ್ವಿ ಸೂರ್ಯ ಪ್ರಕರಣದಲ್ಲಿ ಘಟನೆ ನಡೆದು ಒಂದು ತಿಂಗಳು ಕಳೆದರೂ ಯಾವುದೇ ಪ್ರಕರಣ ದಾಖಲಾಗಿಲ್ಲ.
ತಾನು ಎಸಗಿದ ಕಿಡಿಗೇಡಿತನದ ಬಗ್ಗೆ ನಂತರ ಸಂಸದ ತೇಜಸ್ವಿ ಸೂರ್ಯ ಅವರು ಲಿಖಿತ ಕ್ಷಮಾಪಣೆ ಪತ್ರವನ್ನು ಬರೆದಿದ್ದಾರೆ ಎಂದು ವರದಿಯಾಗಿದೆ. ಆದರೂ ವಿಮಾನಯಾನ ಸಂಸ್ಥೆಯ ಅವರ ವಿರುದ್ಧ ಯಾವುದೇ ಹೆಚ್ಚಿನ ತನಿಖೆಯನ್ನು ನಡೆಸದೆ, ಅದೇ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ.
ವಿಮಾನದ ತುರ್ತು ನಿರ್ಗಮನವನ್ನು ತೆರೆಯುವುದು ಗಂಭೀರ ಉಲ್ಲಂಘನೆಯಾಗಿದೆ ಮತ್ತು ಇದು ಪ್ರಕರಣ ದಾಖಲಿಸಬಹುದಾದ ಘಟನೆಯಾಗಿದೆ” ಎಂದು ವಾಯುಯಾನ ಸುರಕ್ಷತಾ ತಜ್ಞ ಕ್ಯಾಪ್ಟನ್ ಮೋಹನ್ ರಂಗನಾಥನ್ ಅವರು ಹೇಳಿದ್ದಾರೆ.
“ತುರ್ತು ನಿರ್ಗಮನ ಬಾಗಿಲನ್ನು ಮತ್ತೆ ಹೊಂದಿಸಬೇಕಾಗಿರುವುದರಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿತ್ತು ಮತ್ತು ದೂರು ಸಲ್ಲಿಸಬೇಕು. ಈ ಬಗ್ಗೆ ಡಿಜಿಸಿಎಗೆ ವರದಿ ಸಲ್ಲಿಸಬೇಕಿತ್ತು. ಪ್ರಯಾಣಿಕ ಕ್ಷಮೆಯಾಚಿಸಿದ ಕಾರಣ ಅಥವಾ ಅವರು ವಿಐಪಿ ಆಗಿರುವ ಕಾರಣ ಅದನ್ನು ಮುಚ್ಚಿಡಬಹುದಾದ ವಿಷಯವಲ್ಲ” ಎಂದು ಮೋಹನ್ ರಂಗನಾಥನ್ ಹೇಳಿದ್ದಾರೆ.