
ಕಾಬೂಲ್: ಅಫ್ಘಾನಿಸ್ತಾನವನ್ನು (Afghanistan) ತಾಲಿಬಾನ್ (Taliban) ವಶಪಡಿಸಿಕೊಳ್ಳುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದಿದ್ದ ಮಾಜಿ ಸಂಸದೆ (Former Lawmaker) ಗುಂಡಿಕ್ಕಿ ಕೊಂದಿರುವ ಘಟನೆ ಅಫ್ಘನ್ ರಾಜಧಾನಿ ಕಾಬೂಲ್ನಲ್ಲಿ (Kabul) ನಡೆದಿರುವುದಾಗಿ ಅಲ್ಲಿನ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಮಾಜಿ ಸಂಸದೆ ಮುರ್ಸಲ್ ನಬಿಜಾದಾ (Mursal Nabizada)(32) ಅವರ ಮನೆಗೆ ಶನಿವಾರ ರಾತ್ರಿ ವೇಳೆ ಬಂದೂಕುಧಾರಿಗಳು ನುಗ್ಗಿದ್ದು, ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಗುಂಡಿನ ದಾಳಿ ವೇಳೆ ನಬಿಜಾದಾ ಅವರ ಅಂಗರಕ್ಷಕರೊಬ್ಬರು ಕೂಡಾ ಸಾವನ್ನಪ್ಪಿದ್ದಾರೆ ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ಹೇಳಿದ್ದಾರೆ.
ಮುರ್ಸಲ್ ನಬಿಜಾದಾ ಅವರು ಈ ಹಿಂದಿನ ಅಮೆರಿಕ ಬೆಂಬಲಿತ ಸರ್ಕಾರದ ಸಂಸತ್ತಿನ ಸದಸ್ಯರಾಗಿದ್ದರು. ಅವರು ಅಫ್ಘಾನಿಸ್ತಾನದ ಒಬ್ಬ ನಿರ್ಭೀತ ನಾಯಕಿಯಾಗಿದ್ದರು ಎಂದು ಮಾಜಿ ಶಾಸಕ ಮರಿಯಮ್ ಸೊಲೈಮಂಖಿಲ್ ತಿಳಿಸಿದ್ದಾರೆ. ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ವೇಳೆ ಅವರು ತಮ್ಮ ಅಧಿಕಾರದಿಂದ ಕೆಳಗಿಳಿಯಬೇಕಾಯಿತು.
ಶನಿವಾರ ರಾತ್ರಿ ನಡೆದಿರುವ ಗುಂಡಿನ ದಾಳಿಯಲ್ಲಿ ಮುರ್ಸಲ್ ನಬಿಜಾದಾ ಹಾಗೂ ಅವರ ಅಂಗರಕ್ಷಕ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಬಿಜಾದಾ ಅವರ ಸಹೋದರ ಕೂಡಾ ಗಾಯಗೊಂಡಿದ್ದಾರೆ. ಘಟನೆಯನ್ನು ಭದ್ರತಾ ಪಡೆಗಳು ಗಂಭೀರವಾಗಿ ತೆಗೆದುಕೊಂಡಿದ್ದು, ತನಿಖೆಯನ್ನು ಪ್ರಾರಂಭಿಸಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಉನ್ನತ ಸರ್ಕಾರಿ ಹುದ್ದೆಯಲ್ಲಿರುವವರಿಗೆ ದೇಶವನ್ನು ತೊರೆಯಲು ಅವಕಾಶ ನೀಡಲಾಗಿತ್ತು. ಅಂತಹ ಉನ್ನತ ಹುದ್ದೆಯಲ್ಲಿದ್ದ ಹಲವಾರು ಮಹಿಳೆಯರು ವಿದೇಶಕ್ಕೆ ತೆರಳಿದ್ದರು. ಆದರೆ ನಬಿಜಾದಾ ಮಾತ್ರ ತನ್ನ ಜನರಿಗಾಗಿ ಅಫ್ಘಾನಿಸ್ತಾನದಲ್ಲೇ ಉಳಿಯಲು ಹಾಗೂ ಹೋರಾಡಲು ನಿರ್ಧರಿಸಿದ್ದರು ಎಂದು ವರದಿಗಳು ತಿಳಿಸಿವೆ.