
ಮಂಗಳೂರು: ರಾಜ್ಯದ ಕರಾವಳಿಯಲ್ಲಿ ವ್ಯಾಪಾರ ಬಹಿಷ್ಕಾರದ ಧರ್ಮ ದಂಗಲ್ ಮತ್ತೆ ಮುಂದುವರಿದಿದೆ. ಕಳೆದ ವರ್ಷದಿಂದ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಬಹಿಷ್ಕಾರ ಹಾಕಲಾಗುತ್ತಿದೆ. ಇದೀಗ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಮಂಗಳೂರಿನ (Mangaluru) ಕಾವೂರು (Kavoor) ಶ್ರೀಮಹಾಲಿಂಗೇಶ್ವರ ದೇವಸ್ಥಾನದ (Shree Mahalingeswara Temple) ಜಾತ್ರೆಯಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ವಿಎಚ್‍ಪಿ – ಭಜರಂಗದಳ ಬಹಿಷ್ಕಾರ ಹಾಕಿದ್ದು, ಕ್ಷೇತ್ರದ ಆಡಳಿತ ಮಂಡಳಿಯೂ ಸಮ್ಮತಿ ನೀಡಿದೆ.
ಕಳೆದ ವರ್ಷದಿಂದ ಕರಾವಳಿಯ ಹೆಚ್ಚಿನ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಲಾಗಿತ್ತು. ಈ ಸಂಪ್ರದಾಯ ಈ ವರ್ಷವೂ ಮುಂದುವರಿದಿದ್ದು, ಇದೀಗ ಮಂಗಳೂರಿನ ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಈ ಬಹಿಷ್ಕಾರ ಮುಂದುವರಿದಿದೆ. ಈ ದೇವಸ್ಥಾನದ ಜಾತ್ರಾ ಮಹೋತ್ಸವವು (Fair) ಜ. 14ರ ಮಕರ ಸಂಕ್ರಮಣದಿಂದ ಆರಂಭಗೊಂಡು ಜ. 18ರವರೆಗೆ ನಡೆಯಲಿದೆ.
ಈ 4 ದಿನಗಳ ಕಾಲ ಸಾವಿರಾರು ಜನ ಸೇರುವ ಈ ಜಾತ್ರೆಯಲ್ಲಿ ನೂರಾರು ವ್ಯಾಪಾರಸ್ಥರು ವ್ಯಾಪಾರ ಮಾಡ್ತಾರೆ. ಕಳೆದ ಹಲವಾರು ವರ್ಷಗಳಿಂದಲೂ ಈ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದರು. ಆದರೆ ಈ ಬಾರಿ ಮಾತ್ರ ಮುಸ್ಲಿಂ ವ್ಯಾಪಾರಸ್ಥರಿಗೆ ಈ ಜಾತ್ರೆಯಲ್ಲಿ ಬಹಿಷ್ಕಾರ ಹಾಕಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ಅನುಮತಿ ಪಡೆದು ಕ್ಷೇತ್ರದ ಆವರಣದಲ್ಲಿ ವಿಎಚ್‍ಪಿ ಹಾಗೂ ಭಜರಂಗದಳ ಬ್ಯಾನರ್ ಅಳವಡಿಕೆ ಮಾಡಿದ್ದು, ಅನ್ಯಧರ್ಮಿಯರ ವ್ಯಾಪಾರಕ್ಕೆ ಸಂಪೂರ್ಣ ಬಹಿಷ್ಕಾರ ಹಾಕಲಾಗಿದೆ.