
ಬೆಂಗಳೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಹುಮ್ಮಸ್ಸಿನಲ್ಲಿದ್ದ ಜನಾರ್ದನ ರೆಡ್ಡಿಗೆ (Janardhan Reddy) ರಾಜ್ಯ ಸರ್ಕಾರ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ.
ರೆಡ್ಡಿಯ ಆಸ್ತಿ ಜಪ್ತಿಗೆ ಸರ್ಕಾರ ಕೊನೆಗೂ ಅಸ್ತು ಎಂದಿದೆ. ಅಕ್ರಮ ಗಣಿಗಾರಿಕೆ (Illegal Mining) ಹಣದಿಂದ ರೆಡ್ಡಿ ಹೊಸದಾಗಿ ತೆಲಂಗಾಣ ರಾಜ್ಯಗಳಲ್ಲಿ 219 ಕಡೆ ಆಸ್ತಿಗಳನ್ನು ಖರೀದಿ ಮಾಡಿದ್ದಾರೆ. ಈ ಆಸ್ತಿಗಳನ್ನು ಜಪ್ತಿ ಮಾಡಲು ಅನುಮತಿ ನೀಡಬೇಕೆಂದು ಸರ್ಕಾರಕ್ಕೆ 2022ರ ಆಗಸ್ಟ್ 30 ರಂದು ಸಿಬಿಐ (CBI) ಪ್ರಾಸಿಕ್ಯೂಷನ್ಗೆ ಮನವಿ ಮಾಡಿತ್ತು.
ಸರ್ಕಾರದದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಸಿಬಿಐ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಸಿಬಿಐ ಅರ್ಜಿಗೆ ಸರ್ಕಾರ ಯಾವುದೇ ಉತ್ತರ ನೀಡಿರಲಿಲ್ಲ.
ಆಸ್ತಿ ಜಪ್ತಿ ಅರ್ಜಿ ವಿಚಾರ ತಿಳಿದ ರೆಡ್ಡಿ ಕರ್ನೂಲ್, ರಂಗಾರೆಡ್ಡಿ ಜಿಲ್ಲೆಗಳಲ್ಲಿ ಆಸ್ತಿ ಮಾರಾಟಕ್ಕೆ ಯತ್ನಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಜಪ್ತಿಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಬೇಕು ಅಂತಾ ಸಿಬಿಐ ಹೈಕೋರ್ಟ್ನಲ್ಲಿ ವಾದ ಮಂಡಿಸಿತ್ತು.
ನಿಮ್ಮ ಕಾರ್ಯವೈಖರಿ ಇದೇನಾ? ಐದು ತಿಂಗಳಾದರೂ ಯಾಕೆ ಕ್ರಮ ಕೈಗೊಂಡಿಲ್ಲ? ನಿಮ್ಮ ದೃಷ್ಟಿಯಲ್ಲಿ ನಿರ್ಧಾರ ಕೈಗೊಳ್ಳದೇ ಇರುವುದು ಒಂದು ಕ್ರಮವಿರಬಹುದು. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಈ ಹಿಂದಿನ ವಿಚಾರಣೆಯಲ್ಲಿ ಹೈಕೋರ್ಟ್ ಚಾಟಿ ಬೀಸಿ ನೋಟಿಸ್ ಜಾರಿ ಮಾಡಿತ್ತು.
ಗುರುವಾರ ಅರ್ಜಿ ವಿಚಾರಣೆ ವೇಳೆ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿರುವ ಬಗ್ಗೆ ಹೈಕೋರ್ಟ್ಗೆ ಸರ್ಕಾರಿ ವಕೀಲರು ಮಾಹಿತಿ ನೀಡಿದರು. ಸಿಬಿಐ ಸಲ್ಲಿಸಿದ್ದ ಅರ್ಜಿ ಇತ್ಯರ್ಥಗೊಳಿಸಿದ ಹೈಕೋರ್ಟ್ ಆಸ್ತಿ ಜಪ್ತಿಗೆ ಸಿಬಿಐ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಮುಂದುವರೆಯುವಂತೆ ಸೂಚನೆ ನೀಡಿತು.