
ಚಿಕ್ಕೋಡಿ: ಕಾಂಗ್ರೆಸ್ (Congress) ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ (Free Electricity) ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಘೋಷಣೆ ಮಾಡಿದ್ದಾರೆ.
ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿಕೆಶಿ ಉಚಿತ ವಿದ್ಯುತ್ ನೀಡುವ ಘೋಷಣೆ ಮಾಡಿ ಮುಖಂಡರಿಂದ ಬಿತ್ತಿ ಫಲಕ ಬಿಡುಗಡೆ ಮಾಡಿದರು. ಇನ್ಮೇಲೆ ನೀವ್ಯಾರೂ ಕರೆಂಟ್‌ಗೆ ದುಡ್ಡು ಕೊಡಬೇಕಾಗಿಲ್ಲ. 200 ಯೂನಿಟ್ ವರೆಗೂ ನೀವ್ಯಾರೂ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ ಎಂದು ಡಿಕೆಶಿ ಘೋಷಿಸಿದರು.
ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ವಚನ ಕೊಟ್ರು, ಯಾರಿಗಾದರೂ ಆಯ್ತಾ? ನಿಮ್ಮ ಎಲ್ಲಾ ಸಾಲಗಳನ್ನು ಮನ್ನಾ ಮಾಡುತ್ತೇವೆ ಅಂತ ಹೇಳಿದ್ರು, ಯಾರದ್ದಾದರೂ ಸಾಲ ಮನ್ನಾ ಆಯ್ತಾ? ಆಪರೇಷನ್ ಕಮಲ ಮಾಡಿ ನಿಮ್ಮ ಜಿಲ್ಲೆಯ ಮೂವರನ್ನು ಕರೆದುಕೊಂಡು ಸರ್ಕಾರ ಮಾಡಿದರು. ಇವರು ನಿಮಗೇನಾದರೂ ಹೇಳಿದ್ರಾ? ಬಿಜೆಪಿಯ ಪಾಪಾದ ಪುರಾಣ ನಾವು ಬಿಡುಗಡೆ ಮಾಡಿದ್ದೇವೆ ಎಂದು ಕಿಡಿಕಾರಿದರು.

ಇದು ಬಿ ರಿಪೋರ್ಟ್ ಬರೆಯುವ ಸರ್ಕಾರ. ಮಂಚ, ಲಂಚದ ಸರ್ಕಾರ. 40 ಪರ್ಸೆಂಟ್ ಕಮಿಷನ್ ಸರ್ಕಾರ. ಈ ದೇಶದಲ್ಲಿ ಬರೀ ಕೋಮು ವಿಷ ಬೀಜ ಬಿತ್ತುವ ಕೆಲಸ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ., ಮಂತ್ರಿ ಹುದ್ದೆಗೆ 100 ಕೋಟಿ ರೂ., ಮಠಗಳ ಅನುದಾನಕ್ಕೆ 40 ಪರ್ಸೆಂಟ್, ಮೊಟ್ಟೆಗಳಿಗೆ 30 ಪರ್ಸೆಂಟ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಗುತ್ತಿಗೆದಾರರು ದೂರು ನೀಡಿದರೂ, ಸಂತೋಷ್ ಪಾಟೀಲ್ ಕೆಲಸ ಮಾಡಿದರೂ ಈವರೆಗೂ ಅವರಿಗೆ ಬಿಲ್ ಕೊಡಲಿಲ್ಲ. 3 ವರ್ಷದಿಂದ ಪಾಪದ ಕೊಡ ತುಂಬಿದೆ. ಅವರು ಅಸೆಂಬ್ಲಿ ನಡೆಯುವವರೆಗೂ ಕೂಡಾ ನಿಮಗೆ ವಚನ ನೀಡಲು ಹೋಗುತ್ತಾರೆ. ಮೀಸಲಾತಿ ವಿಚಾರದಲ್ಲಿ ಯಾವ್ಯಾವ ನಾಟಕ ಆಡುತ್ತಿದ್ದಾರೆ, ಜನರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದರು.