

ದ.ಕ.: 17.37 ಲಕ್ಷ ಮತದಾರರು
ಮಂಗಳೂರು: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು ಅಂತಿಮ ಮತದಾರರ ಪಟ್ಟಿಗಳನ್ನು ಗುರುವಾರವೇ ಮತದಾರರ ನೋಂದಣಾಧಿಕಾರಿ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ ಹಾಗೂ ಎಲ್ಲ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
9.11.2022ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಹಕ್ಕು, ಆಕ್ಷೇಪಗಳ ಸೀÌಕಾರದ ಬಳಿಕ ವಿಶೇಷ ನೋಂದಣಿ ಅಭಿಯಾನ ನಡೆದಿದ್ದು ಗುರುತು ಚೀಟಿ ವಿತರಣೆಯೂ ಪ್ರಗತಿಯಲ್ಲಿದೆ. ವಿಶೇಷ ಪರಿಷ್ಕರಣೆ ಮುಕ್ತಾಯಗೊಂಡಿದ್ದರೂ ನಿರಂತರ ಪರಿಷ್ಕರಣೆ ಎಂದಿನಂತೆ ಮುಂದುವರಿಯಲಿದೆ ಎಂದರು.
ಒಟ್ಟಾರೆ 2022ರ ಯೋಜಿತ ಜನಸಂಖ್ಯೆ 23,57,852 ಆಗಿದ್ದು ಅಂತಿಮ ಮತದಾರರ ಪಟ್ಟಿಯಲ್ಲಿ 17,37,688 ಮತದಾರರಿದ್ದಾರೆ. ಇದರಲ್ಲಿ 8,50,552 ಪುರುಷ ಹಾಗೂ 8,87,060 ಮಹಿಳೆಯರು. ಇತರ ಮತದಾರರು ಸಂಖ್ಯೆ 76 ಇದೆ. 47,174 ಮಂದಿಯನ್ನು ಈ ಅಭಿಯಾನದಲ್ಲಿ ಸೇರ್ಪಡೆ ಮಾಡಿದ್ದು 18,441 ಮಂದಿಯ ಹೆಸರು ರದ್ದುಗೊಳಿಸಿದೆ, 18678 ಮಂದಿಯ ಮಾಹಿತಿ ಪರಿಷ್ಕರಿಸಲಾಗಿದೆ.
ಜಿಲ್ಲೆಯಲ್ಲಿ ಹಿಂದಿನ ಪಟ್ಟಿ ಪ್ರಕಾರ 9,845 ಯುವ ಮತದಾರರಿದ್ದು ಈಗ 15,414 ಮಂದಿಯನ್ನು ಸೇರ್ಪಡೆಗೊಳಿಸಲಾಗಿದೆ. ಈ ಮೂಲಕ ಒಟ್ಟು ಸಂಖ್ಯೆ 25,259ಕ್ಕೆ ಏರಿದೆ. ಜಿಲ್ಲೆಯಲ್ಲಿ 13,706 ವಿಕಲಚೇತನ ಮತದಾರರು, 6,392 ಗಣ್ಯ ಮತದಾರರು, 546 ಸೇವಾ ಮತದಾರರು, 76 ಮಂಗಳಮುಖೀಯರು, 225 ಅನಿವಾಸಿ ಭಾರತೀಯ ಮತದಾರರು ಇದ್ದಾರೆ.