

ಮಂಗಳೂರು: ಲವ್ ಜಿಹಾದ್ ವಿಷಯದ ಮೇಲೆ ಕೇಂದ್ರೀಕರಿಸಬೇಕೇ ಹೊರತು ರಸ್ತೆ ಮತ್ತು ಚರಂಡಿ ಸಮಸ್ಯೆಗಳ ಬಗ್ಗೆ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Naleen Kumar Kateel) ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಮಂಗಳೂರಿನಲ್ಲಿ ಸೋಮವಾರ(ಜನವರಿ 02) ‘ಬೂತ್ ವಿಜಯ ಅಭಿಯಾನ’ದಲ್ಲಿ (BJP Booth Vijaya Abhiyana) ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಟೀಲ್ , ರಸ್ತೆ, ಚರಂಡಿ ಅಭಿವೃದ್ಧಿ ಕುರಿತು ಬಿಟ್ಟು, ಲವ್ ಜಿಹಾದ್ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದರ ಕುರಿತು ಜನರು ಚರ್ಚೆಯಲ್ಲಿ ತೊಡಗುವಂತೆ ಮಾಡಿ ಬಿಜೆಪಿ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.
ರಸ್ತೆಗಳು ಮತ್ತು ಚರಂಡಿಯಂತಹ ಸಣ್ಣ ಸಮಸ್ಯೆಗಳ ಬಗ್ಗೆ ಮಾತನಾಡಬೇಡಿ. ವಿಧಾನಸೌಧದೊಳಗೆ ವೇದವ್ಯಾಸರು ಕೈ ಎತ್ತಲಿಲ್ಲ ಎಂದು ಚರ್ಚೆ ಮಾಡಬೇಡಿ. ನಳಿನ್ ಕುಮಾರ್ ಅವರಿಗೆ ವಿಷಯ ಎತ್ತುವ ಹಕ್ಕು ಇಲ್ಲ ಎಂದು ಹೇಳಬೇಡಿ. ನಳಿನ್ ಕುಮಾರ್ ಕಟೀಲ್ ಅವರ ಹಕ್ಕುಗಳಿಂದ ನೀವು ಚಿನ್ನವನ್ನು ಪಡೆಯುವುದಿಲ್ಲ. ನೀವು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದರೆ ಮತ್ತು ನೀವು ಲವ್ ಜಿಹಾದ್ ನಿಲ್ಲಿಸಲು ಬಯಸಿದರೆ, ನಮಗೆ ಭಾರತೀಯ ಜನತಾ ಪಕ್ಷ ಬೇಕು. ಲವ್ ಜಿಹಾದ್ ತೊಲಗಲು ಬಿಜೆಪಿ ಬೇಕು ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಲವ್ ಜಿಹಾದ್’ ಹೆಚ್ಚಾಗಲಿದೆ. ಗೋಹತ್ಯೆ ಮತ್ತು ಧಾರ್ಮಿಕ ಮತಾಂತರದ ವಿರುದ್ಧದ ಕಾನೂನುಗಳನ್ನು ಹಿಂಪಡೆಯುತ್ತಾರೆ. ಜನರು ಈಗ ‘ನವ ಕರ್ನಾಟಕ’ ಬೇಕೇ ಅಥವಾ ‘ಭಯೋತ್ಪಾದನೆಯ ನಾಡು ಬೇಕೇ ಎಂಬುದನ್ನು ನಿರ್ಧರಿಸಬೇಕಿದೆ. ಕಾಂಗ್ರೆಸ್ ಭಯೋತ್ಪಾದಕರ ಪಕ್ಷ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ಭಯೋತ್ಪಾದಕರಿಗೆ ಫೀಲ್ಡ್ ಡೇ ಆಗುತ್ತದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು..
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆಎಫ್‌ಡಿ)ಯನ್ನು ನಿಷೇಧಿಸುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಿಟ್ಟ ನಿರ್ಧಾರ ಕೈಗೊಂಡರು. ಈ ಸಂಘಟನೆಗಳನ್ನು ನಿಷೇಧಿಸದಿದ್ದರೆ ಮೋನಪ್ಪ ಭಂಡಾರಿ ಮತ್ತು ಹರಿಕೃಷ್ಣ ಬಂಟ್ವಾಳ್ (ಬಿಜೆಪಿ ನಾಯಕರು) ಇಷ್ಟೊತ್ತಿಗಾಗಲೇ ಸತ್ತಿರುತ್ತಿದ್ದರು ಎಂದರು.
ನಮ್ಮ ಗೆಲುವು ನಮ್ಮ ಸಂಘಟನೆಯ ಬಲದ ಮೇಲೆ ಇರಬೇಕು. ಭಾರತವು ಸಾಂಸ್ಕೃತಿಕವಾಗಿ ಪರಿವರ್ತನೆ ಹೊಂದಬೇಕು ಮತ್ತು ಅದಕ್ಕಾಗಿ ನಾವು ಬೂತ್ ಮಟ್ಟಗಳಲ್ಲಿ ಗೆಲ್ಲಬೇಕು ಎಂದು ಹೇಳಿದರು.