

ದಕ್ಷಣ ಕನ್ನಡ: ಮಂಗಳೂರಿನ (Mangalore) ಕಾಟಿಪಳ್ಳದಲ್ಲಿ ನಡೆದ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿಕೆ ನೀಡಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ವಶಕ್ಕೆ ಪಡೆದ ಮೂವರ ಪೈಕಿ ಇಬ್ಬರು ಕೃತ್ಯದಲ್ಲಿ ಭಾಗಿಯಾಗಿದ್ದು, ಒಬ್ಬ ಬೈಕ್ನಲ್ಲಿ ಕರೆತಂದು ಇಬ್ಬರನ್ನು ಡ್ರಾಪ್ ಮಾಡಿದ್ದ. ಕೊಲೆಗೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮೂವರಲ್ಲಿ ಇಬ್ಬರು ಈ ಹಿಂದೆ ಹಲವು ಪ್ರಕರಣಗಳಲ್ಲಿ ಮತ್ತು 2021ರಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಸದ್ಯ ಅವರನ್ನು ನ್ಯಾಯಾಲಯಕ್ಕೆ ಹಾಜರು ಮಾಡಿದ್ದೇವೆ. 14 ದಿನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ನೈತಂಗಡಿ ಕೃಷ್ಣಾಪುರ ನಿವಾಸಿ ಶೈಲೇಶ್ ಯಾನೇ ಶೈಲೇಶ್ ಪೂಜಾರಿ (21), ಉಡುಪಿ ಹೆಜಮಾಡಿ ನಿವಾಸಿ ಸವೀನ್ ಕಾಂಚನ್ ಯಾನೇ ಮುನ್ನ (24), ಕೃಷ್ಣಾಪುರ 3ನೇ ಬ್ಲಾಕ್ ನಿವಾಸಿ ಪವನ್ ಅಲಿಯಾಸ್ ಪಚ್ಚು (23) ಬಂಧಿತ ಆರೋಪಿಗಳು.
ತನಿಖೆ ಬಳಿಕ ಹೆಚ್ಚಿನ ಮಾಹಿತಿ
ಗುರುತು ಪತ್ತೆ ಆಗೋವರೆಗೂ ಆರೋಪಿಗಳ ಮಾಹಿತಿ ಹೇಳಲು ಆಗಲ್ಲ. ನಿನ್ನೆ ರಾತ್ರಿ ಅವರನ್ನು ವಶಕ್ಕೆ ಪಡೆಯಲಾಗಿದೆ, ಹೆಚ್ಚಿನ ವಿಚಾರಣೆ ಮಾಡುತ್ತೇವೆ. ಕೊಲೆಗೆ ಕಾರಣ ಏನು ಅನ್ನೋದನ್ನ ಪೂರ್ಣ ತನಿಖೆ ಬಳಿಕ ಹೇಳುತ್ತೇವೆ. ಜಲೀಲ್ ಕೇಸ್ನಲ್ಲಿ ಮಹಿಳೆಯರೂ ಸೇರಿ 10-12 ಜನರನ್ನ ವಶಕ್ಕೆ ಪಡೆದಿದ್ದೆವು. ಜಲೀಲ್ ಕುಟುಂಬಸ್ಥರು ಸೇರಿ ಕೆಲವರ ವಿಚಾರಣೆ ನಡೆದಿದೆ. ಆದರೆ ಸದ್ಯ ಒಟ್ಟು 3 ಜನರನ್ನ ಮಾತ್ರ ಬಂಧನ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದರು.
ಕೇಶವ ಪೂಜಾರಿ ಪುತ್ರನ ಬಂಧನ: ಇನ್ನು ಶೈಲೇಶ್ ಪೂಜಾರಿ ಹಲವು ವರ್ಷಗಳ ಹಿಂದೆ ನಡೆದ ರವೂಫ್ ಎಂಬಾತನ ಕೊಲೆ ಆರೋಪಿಯ ಪುತ್ರನಾಗಿದ್ದಾನೆ. ಸುಮಾರು ವರ್ಷಗಳ ಹಿಂದೆ ಕಾಟಿಪಳ್ಳದಲ್ಲಿ ನಡೆದಿದ್ದ ರವೂಫ್ ಹತ್ಯೆ ಪ್ರಕರಣದಲ್ಲಿ ಈಗಿನ ಆರೋಪಿ ಶೈಲೇಶ್ ಅವರ ತಂದೆ ಕೇಶವ ಪೂಜಾರಿ ಪ್ರಮುಖ ಆರೋಪಿಯಾಗಿದ್ದರು. ಈಗ ಮತ್ತೆ ಧರ್ಮದಂಗಲ್ ಶುರುವಾಗಿದ್ದು, ಪರಸ್ಪರ ಕೋಮು ದಳ್ಳುರಿಯಿಂದ ಕೊಲೆಗಳು ನಿರಂತರವಾಗಿ ನಡೆಯುತ್ತಿವೆ. ಸುರತ್ಕಲ್ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.