

ಮಂಗಳೂರು (ಡಿ.13): ಖಾಸಗಿ ಪದವಿಪೂರ್ವ ಕಾಲೇಜಿನ ಹಿಂದೂ ಸಮುದಾಯದ ವಿದ್ಯಾರ್ಥಿನಿ ಹಾಗೂ ಮುಸ್ಲಿಂ ಸಮುದಾಯದ ವಿದ್ಯಾರ್ಥಿ ನಡುವಿನ ಪ್ರೇಮ ಪ್ರಕರಣದ ವಿಚಾರದಲ್ಲಿ ವಿವಾದ ಉಂಟಾಗಿ ಒಟ್ಟು 18 ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆವರೆಗೆ ಕಾಲೇಜು ಪ್ರಾಂಶುಪಾಲರು ಅಮಾನತು ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ವಿಠಲ್ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ.
ಪೋಷಕರ ಸಮ್ಮುಖದಲ್ಲಿ ಆಡಳಿತ ಮಂಡಳಿ ಮತ್ತು ಉಪನ್ಯಾಸಕರ ನಡುವೆ ಮಾತುಕತೆ ನಡೆದು ಮುನ್ನೆಚ್ಚರಿಕೆ ದೃಷ್ಟಿಯಿಂದ ಸುಮಾರು 18 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ಸೂಚಿಸಿ ಮನೆಗೆ ಕಳುಹಿಸಲಾಗಿದೆ. ಕೆಲವು ಸಮಯದಿಂದ ಹಿಂದೂ ಸಮುದಾಯದ ವಿದ್ಯಾರ್ಥಿನಿ ಹಾಗೂ ಮುಸ್ಲಿಂ ವಿದ್ಯಾರ್ಥಿ ನಡುವೆ ಪ್ರೇಮ ಪ್ರಕರಣ ನಡೆದಿರುವುದರ ಗಮನಕ್ಕೆ ಬಂದ ಕಾಲೇಜು ಆಡಳಿತ ವರ್ಗ ಪೊಷಕರನ್ನು ಕರೆಸಿ ವಿಷಯವನ್ನು ತಿಳಿಸಿತ್ತು. ಈ ಬಳಿಕ ಕೆಲವು ಸಮಯ ಯಾವುದೇ ಗೊಂದಲವಿರಲಿಲ್ಲ.
ವಿದ್ಯಾರ್ಥಿನಿ ಕೈಯಲ್ಲಿ ಪ್ರೇಮಪತ್ರ: ಆದರೆ ಕಾಲೇಜು ವಾರ್ಷಿಕೋತ್ಸವ ಸಮಯ ಮತ್ತೆ ಪ್ರೇಮ ಪ್ರಕರಣ ವಿಚಾರದಲ್ಲಿ ಚರ್ಚೆಗಳು ಆರಂಭವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಉಪನ್ಯಾಸಕರ ತಂಡ ತರಗತಿಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವ ಬಗ್ಗೆ ತಪಾಸಣೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಹಿಂದೂ ಸಮುದಾಯದ ವಿದ್ಯಾರ್ಥಿನಿಯ ಕೈಯಲ್ಲಿ ಪ್ರೇಮ ಪತ್ರ ಪತ್ತೆಯಾಗಿತ್ತು. ಈ ದಿನ ಮುಸ್ಲಿಂ ವಿದ್ಯಾರ್ಥಿ ಕಾಲೇಜಿಗೆ ಬಂದಿರಲಿಲ್ಲ. ಯುವತಿಯ ಪೋಷಕರಲ್ಲಿ ಮಾತುಕತೆ ನಡೆಸಿ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಯುವತಿಯನ್ನು ಪರೀಕ್ಷೆಗೆ ಮಾತ್ರ ಆಗಮಿಸುವಂತೆ ಸೂಚನೆ ನೀಡಿದ್ದಾರೆ.
ತರಗತಿಯಿಂದ ಅಮಾನತು: ಇನ್ನು ಮುಸ್ಲಿಂ ಯುವಕ ತರಗತಿಗೆ ಹಾಜರಾಗುತ್ತಿದ್ದಂತೆ ಒಂದು ವರ್ಗದ ವಿದ್ಯಾರ್ಥಿಗಳು ಹೋಗಿ ಪ್ರಶ್ನಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮುಸ್ಲಿಂ ಯುವಕ ಹಾಗೂ ಆತನಿಗೆ ಸಹಕಾರ ಮಾಡಿದ 9 ಮಂದಿ ಮುಸ್ಲಿಂ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಹಾಗೂ ಪ್ರಶ್ನಿಸಲು ಹೋದ ಹಿಂದೂ 9 ಮಂದಿ ವಿದ್ಯಾರ್ಥಿಗಳನ್ನು ಪೋಷಕರ ಸಮ್ಮುಖದಲ್ಲಿ ವಿಚಾರಣೆ ನಡೆಸಿ ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ಸೂಚಿಸಿ ಮನೆಗೆ ಕಳುಹಿಸಿದ್ದಾರೆ.