

ದೋಹಾ(ಡಿ.12): ದೋಹಾ: ಯೂಸುಫ್ ಎನ್-ನೆಸ್ರಿ ಬಾನೆತ್ತರಕ್ಕೆ ಜಿಗಿದು ಮನಮೋಹಕ ಹೆಡ್ಡರ್ ಮೂಲಕ ಬಾರಿಸಿದ ಗೋಲು ಮೊರಾಕ್ಕೊವನ್ನು ಫಿಫಾ ವಿಶ್ವಕಪ್‌ನಲ್ಲಿ ಚೊಚ್ಚಲ ಬಾರಿಗೆ ಸೆಮಿಫೈನಲ್‌ಗೇರಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಪೋರ್ಚುಗಲ್ ವಿರುದ್ಧ 1-0 ಗೋಲಿನ ಗೆಲುವು ಸಾಧಿಸಿದ ಮೊರಾಕ್ಕೊ, ಮತ್ತೊಂದು ಆಘಾತಕಾರಿ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ಸ್ಪೇನ್, ಬ್ರೆಜಿಲ್ ಬಳಿಕ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದ್ದ ಪೋರ್ಚುಗಲ್ ಸಹ ಆಘಾತಕಾರಿ ಸೋಲಿನ ಬಳಿಕ ಟೂರ್ನಿಗೆ ವಿದಾಯ ಹೇಳಿದೆ. ಪ್ರಿ ಕ್ವಾರ್ಟರ್‌ನಲ್ಲಿ 6-1 ಗೋಲುಗಳ ಅಬ್ಬರದ ಜಯ ಸಾಧಿಸಿ ಮೆರೆದಿದ್ದ ಪೋರ್ಚುಗಲ್, ಮೊರಾಕ್ಕೊ ರಕ್ಷಣಾ ಪಡೆಯನ್ನು ಭೇದಿಸಿ ಒಂದೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ.
ಪೋರ್ಚುಗಲ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ತಮ್ಮ ತಂಡ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ ಬಳಿಕ, ಮೊರಾಕ್ಕೊ ಆಟಗಾರ ಸೋಫಿಯಾನ್ ಬೂಫಾಲ್ ಸ್ಟ್ಯಾಂಡ್‌್ಸನಲ್ಲಿದ್ದ ತಮ್ಮ ತಾಯಿಯನ್ನು ಮೈದಾನಕ್ಕೆ ಕರೆತಂದು ಅವರೊಂದಿಗೆ ಡ್ಯಾನ್ಸ್ ಮಾಡುತ್ತಾ ಸಂಭ್ರಮಿಸಿದರು. ಅವರ ಸಂಭ್ರಮಾಚರಣೆಯ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.
https://twitter.com/ZAJD01/status/1601627478774403072?ref_src=twsrc%5Etfw%7Ctwcamp%5Etweetembed%7Ctwterm%5E1601627478774403072%7Ctwgr%5E6ffe4ab9f6248f6707239f9c4e3f2c1dcb7edc95%7Ctwcon%5Es1_c10&ref_url=https%3A%2F%2Fkannada.asianetnews.com%2Ffootball-sports%2Ffifa-world-cup-2022-morocco-star-sofiane-boufal-dances-with-mother-after-historic-win-over-portugal-kvn-rmrgjk
ಪಂದ್ಯದ 42ನೇ ನಿಮಿಷದಲ್ಲೇ ನೆಸ್ರಿ ಗೋಲು ಗಳಿಸಿ ಮೊರಾಕ್ಕೊಗೆ ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧದಲ್ಲಿ ರೊನಾಲ್ಡೋ ಕಣಕ್ಕಿಳಿದರೂ ಪೋರ್ಚುಗಲ್‌ನ ಅದೃಷ್ಟಬದಲಾಗಲಿಲ್ಲ. ಸಮಬಲ ಸಾಧಿಸಿ ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ಕೊಂಡೊಯ್ಯಲು ಸಹ ಪೋರ್ಚುಗಲ್‌ಗೆ ಸಾಧ್ಯವಾಗಲಿಲ್ಲ. ಮೊದಲ ಸೋಲು: ಪೋರ್ಚುಗಲ್‌ಗೆ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಇದು ಮೊದಲು ಸೋಲು. ಈ ಹಿಂದೆ 1966, 2006ರಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದಾಗ ತಂಡ ಸೆಮೀಸ್ ಪ್ರವೇಶಿಸಿತ್ತು.
ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಆಫ್ರಿಕಾ ಖಂಡದ ಮೊದಲ ತಂಡ ಎನ್ನುವ ಹಿರಿಮೆಗೆ ಮೊರಾಕ್ಕೊ ಪಾತ್ರವಾಗಿದೆ. ಈ ಮೊದಲು ಆಫ್ರಿಕಾದ 3 ತಂಡಗಳು ಕ್ವಾರ್ಟರ್ ಫೈನಲ್‌ವರೆಗಷ್ಟೇ ತಲುಪಿದ್ದವು. 1990ರಲ್ಲಿ ಕ್ಯಾಮರೂನ್, 2002ರಲ್ಲಿ ಸೆನೆಗಲ್, 2010ರಲ್ಲಿ ಘಾನಾ ಅಂತಿಮ 8ರ ಸುತ್ತಿನಲ್ಲಿ ಸೋತಿದ್ದವು.