

ಕಾಬುಲ್: ಪಶ್ಚಿಮ ಅಫ್ಘಾನಿಸ್ತಾನದಲ್ಲಿ (Afghanistan) ಕೊಲೆ ಆರೋಪಿಯನ್ನು ತಾಲಿಬಾನ್ ಸಾರ್ವಜನಿಕವಾಗಿ ಗಲ್ಲಿಗೇರಿಸಿದೆ. ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕೊಲೆ ಆರೋಪಿಯನ್ನು ಗಲ್ಲಿಗೇರಿಸಲಾಗಿದೆ.
ಪಶ್ಚಿಮ ಫರಾಹ್ ಪ್ರಾಂತ್ಯದಲ್ಲಿ 2017 ರಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಇರಿದು ಕೊಂದ ಆರೋಪವನ್ನು ಈತ ಹೊಂದಿದ್ದ ಎಂದು ತಾಲಿಬಾನ್ (Taliban) ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.
ಈ ಪ್ರಕರಣವನ್ನು ಮೂರು ನ್ಯಾಯಾಲಯಗಳು ತನಿಖೆ ಮಾಡಿವೆ. ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ನೆಲೆಸಿರುವ ತಂಡದ ಅತ್ಯುನ್ನತ ಆಧ್ಯಾತ್ಮಿಕ ನಾಯಕರಿಂದ ಶಿಕ್ಷೆಯನ್ನು ಅಧಿಕೃತಗೊಳಿಸಲಾಗಿದೆ ಎಂದು ಮುಜಾಹಿದ್ ಹೇಳಿದ್ದಾರೆ. ಆದರೆ ವ್ಯಕ್ತಿಯನ್ನು ಹೇಗೆ ಗಲ್ಲಿಗೇರಿಸಲಾಯಿತು ಎಂದು ಅವರು ಹೇಳಿಲ್ಲ.

10ಕ್ಕೂ ಹೆಚ್ಚು ಹಿರಿಯ ತಾಲಿಬಾನ್ ಅಧಿಕಾರಿಗಳು ಮರಣದಂಡನೆ ಶಿಕ್ಷೆ ಸಂದರ್ಭದಲ್ಲಿ ಹಾಜರಾಗಿದ್ದರು. ಹಂಗಾಮಿ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ, ಮತ್ತು ಹಾಲಿ ಉಪ ಪ್ರಧಾನಿ ಅಬ್ದುಲ್ ಘನಿ ಬರಾದಾರ್, ದೇಶದ ಮುಖ್ಯ ನ್ಯಾಯಮೂರ್ತಿ, ಹಂಗಾಮಿ ವಿದೇಶಾಂಗ ಮಂತ್ರಿ ಮತ್ತು ಹಾಲಿ ಶಿಕ್ಷಣ ಸಚಿವರು ಇದ್ದರು.