

ಚಾಮರಾಜನಗರ (ಡಿ.7): ರಾಜ್ಯದ ಗಡಿಜಿಲ್ಲೆ ಹಾಗೂ ಕೂಲಿ ಕಾರ್ಮಿಕರು ಹೆಚ್ಚಾಗಿರುವ ಬಡತನದ ಜಿಲ್ಲೆಗಳಲ್ಲಿ ಒಂದಾಗಿರುವ ಚಾಮರಾಜನಗರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಬಡತನದಲ್ಲಿಯೇ ಜೀವನ ಮಾಡಿ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ ಪತ್ನಿಯನ್ನು ಧಾರ್ಮಿಕ ಸಂಪ್ರದಾಯದಂತೆ ಶವ ಸಂಸ್ಕಾರ ಮಾಡಲು ಹಣವಿಲ್ಲದೇ ತನ್ನ ಪತ್ನಿಯ ಶವವನ್ನು ಪ್ಲಾಸ್ಟಿಕ್ ಮೂಟೆಯಲ್ಲಿ ಸಾಗಣೆ ಮಾಡಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಕಾಗೆಪುರ ಗ್ರಾಮದ ಕಾಳಮ್ಮ (26) ಮೃತರಾಗಿದ್ದಾರೆ. ದಂಪತಿ ಕಳೆದ ಹಲವು ವರ್ಷಗಳಿಂದ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಕಂದಹಳ್ಳಿಯಲ್ಲಿ ವಾಸವಿದ್ದರು. ಆದರೆ, ಇವರು ಕೂಲಿ ಕಾರ್ಮಿಕ ಕೆಲಸ ಮಾಡುವುದು ಹಾಗೂ ಚಿಂದಿ ಆಯುವ ಮೂಲಕ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ, ರವಿಯ ಪತ್ನಿ ಕಾಳಮ್ಮ ಅವರಿಗೆ ಅನಾರೋಗ್ಯ ಇದ್ದರೂ ಉತ್ತಮ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲಿದ ಮಹಿಳೆ ಸಾವನ್ನಪ್ಪಿದ್ದಾಳೆ. ಇನ್ನು ಇವರ ಬಡತನವನ್ನು ಕಂಡು ಯಾರೊಬ್ಬರೂ ಕೂಡ ನೆರವಿಗೆ ಬಂದಿಲ್ಲ. ಇತ್ತ ಹಣವಿಲ್ಲದೆ ಯಾರ ಸಹಾಯವೂ ಸಿಗುವುದಿಲ್ಲ ಎಂದರಿತ ರವಿ ತನ್ನ ಪತ್ನಿಯ ಶವವನ್ನು ಚಾಪೆ, ಹಾಸಿಗೆ ಮತ್ತು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಕೊಂಡು ರಸ್ತೆಯಲ್ಲಿ ಸಾಗಿಸುತ್ತಿರುವ ದೃಶ್ಯ ಇಡೀ ಮನುಕುಲವನ್ನೇ ಅಣಕಿಸುವಂತಿದೆ.
ಸಾರ್ವಜನಿಕರಿಂದ ಪೊಲೀಸರಿಗೆ ಮಾಹಿತಿ: ಗ್ರಾಮದ ರಸ್ತೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಶವ ಸಾಗಿಸುತ್ತಿರುವುದನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ವಿಚಾರಣೆ ಮಾಡಿದಾಗ ನನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ಈಗ ಮೃತಪಟ್ಟಿದ್ದಾಳೆ. ನನ್ನ ಬಳಿ ಶವ ಸಂಸ್ಕಾರ ಮಾಡಲು ಹಣವಿರಲಿಲ್ಲ. ಹೀಗಾಗಿ, ಮನೆಯಲ್ಲಿದ್ದ ಹಾಸಿಗೆಗಳು ಮತ್ತು ಪ್ಲಾಸ್ಟಿಕ್ ಚೀಲದ ಟಾರ್ಪಲ್ನಲ್ಲಿ ಶವವನ್ನು ಸುತ್ತಿಕೊಂಡು ಸಾಗಿಸುತ್ತಿರುವುದಾಗಿ ತಿಳಿಸಿದ್ದಾನೆ. ನಂತರ ಪೊಲೀಸರು ಆಂಬುಲೆನ್ಸ್ ಕರೆಸಿ, ಶವವನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.