

ಮಂಗಳೂರು: ಹಿಂದೂ ನಾವೆಲ್ಲರೂ ಮುಂದು ಅಂತ ಹೇಳಿಕೊಂಡು ಶಾಂತಿಪ್ರಿಯ ಜನರ ಮಧ್ಯೆ ಅಡ್ಡಗೋಡೆ ನಿರ್ಮಾಣ ಮಾಡಿರುವುದು ಮಂಗಳೂರು ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ (Bharath Shetty) ಅವರ ಸಾಧನೆಯಾಗಿದೆ. ತಾಕತ್ತಿದ್ದರೆ ಅವರ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯ ಎಷ್ಟು ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರ, ಸಮುದಾಯ ಭವನಗಳಿಗೆ ಅನುದಾನ ನೀಡಿದ್ದಾರೆಂದು ಪಟ್ಟಿ ಬಿಡುಗಡೆ ಮಾಡಲಿ. ನಾನು ಶಾಸಕನಾಗಿದ್ದಾಗ 24 ನಾರಾಯಣ ಗುರುಗಳ ಮಂದಿರ, ಅಂಬೇಡ್ಕರ್ ಭವನಕ್ಕೆ ಅನುದಾನ ನೀಡಿದೆ. ಇವರೇನು ಮಾಡಿದ್ರು? ಎಂದು ಮಂಗಳೂರು ಉತ್ತರ ಮಾಜಿ ಶಾಸಕ ಮೊಯಿದೀನ್ ಬಾವಾ (Moideen Bava) ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ನಾನು ಶಾಸಕನಾಗಿದ್ದಾಗ ಬಹುಪಾಲು ಕಾಮಗಾರಿ ನಡೆದಿದ್ದ ಸುರತ್ಕಲ್‍ನ ಸುಸಜ್ಜಿತ ಮಾರುಕಟ್ಟೆಯ ಕಾಮಗಾರಿಯನ್ನು ನಿಲ್ಲಿಸಿ 5 ವರ್ಷಗಳು ಆಗಿವೆ. ಈ ಐದು ವರ್ಷಗಳ ಸವಿನೆನಪಿಗಾಗಿ ಬೃಹತ್ ಪಾದಯಾತ್ರೆ, ಅನಿವರ್ಸರಿ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಆರ್‌ಟಿಓ ಕಚೇರಿಯನ್ನು ಸುರತ್ಕಲ್‍ಗೆ ತರಲು ಶ್ರಮಿಸಿದೆ. ಕೆಎ 62 ನೋಂದಣಿಯೂ ಸಿಕ್ಕಿತು, ಅದರೆ ಅದಿನ್ನೂ ಪ್ರಾರಂಭವಾಗಿಲ್ಲ. 700 ಮನೆಗಳ ಆಶ್ರಯ ಕಾಲೋನಿ ಅಪಾರ್ಟ್ಮೆಂಟ್‌ಗೆ ಅನುದಾನ ತಂದೆ, ಅದಿನ್ನೂ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ಸಂಘಟನೆಗಳು ಹಾಗೂ ಜನಸಾಮಾನ್ಯರ ಹೋರಾಟದಿಂದ ಸುರತ್ಕಲ್ ಟೋಲ್ ಶಿಫ್ಟ್ ಆಗಿದೆ. ಆದರೆ ಕೆಎ 19 ವಾಹನಗಳಿಗೆ ಟೋಲ್ ಪಡೆಯುವುದು ಎಲ್ಲಿಯ ನ್ಯಾಯ? ಟೋಲ್ ಫ್ರೀ ಅಂತ ಹೇಳಿದ ಮೇಲೆ 6 ವರ್ಷಗಳ ನಂತರ ಟೋಲ್ ವಸೂಲಿ ಯಾಕೆ? ಈ ಬಗ್ಗೆ ಉಡುಪಿ ಶಾಸಕ ರಘುಪತಿ ಭಟ್ ಧ್ವನಿ ಎತ್ತಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಲ್ಲಿ ರದ್ದು ಆಗಿ ಅಲ್ಲಿ ದುಪ್ಪಟ್ಟು ಸುಂಕ ವಸೂಲಿ ಮಾಡಿದರೆ ಎಲ್ಲಾ ಪಕ್ಷಗಳ ನಾಯಕರು, ಕಾರ್ಯಕರ್ತರು ಸೇರಿಕೊಂಡು ಉಗ್ರ ಹೋರಾಟ ನಡೆಸುತ್ತೇವೆ ಎಂದು ಬಾವಾ ಹೇಳಿದರು.
ಗೆಲ್ಲುವ ಕುದುರೆಗೆ ಕಾಂಗ್ರೆಸ್ ಟಿಕೆಟ್ ನೀಡಲಿದೆ
ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಗೆಲ್ಲುವ ಕುದುರೆ ಹಾಗೂ ಸಾಧನೆಯ ಆಧಾರದಲ್ಲಿ ಪಕ್ಷವು ಟಿಕೆಟ್ ನೀಡಲಿದೆ. ಪಕ್ಷವು ಸೂಕ್ತ ನಿರ್ಧಾರ ಕೈಗೊಂಡು ಟಿಕೆಟ್ ನೀಡಲಿದ್ದು ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಅಭ್ಯರ್ಥಿಯನ್ನು ಅಧಿಕಾರಕ್ಕೆ ಬರಲು ಶ್ರಮಿಸಲಿದ್ದಾರೆ. ಟಿಕೆಟ್ ವಿಚಾರದಲ್ಲಿ ಏನೇ ಗೊಂದಲ ಇದ್ದರೂ ಬಗೆಹರಿಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಸದಾಶಿವ ಶೆಟ್ಟಿ, ಬಶೀರ್ ಬೈಕಂಪಾಡಿ, ವೈ. ರಾಘವೇ0ದ್ರ ರಾವ್, ಬಿ.ಕೆ ತಾರಾನಾಥ್, ರಾಜೇಶ್ ಕುಳಾಯಿ, ಹ್ಯಾರಿಸ್ ಬೈಕಂಪಾಡಿ ಉಪಸ್ಥಿತರಿದ್ದರು.