

ಮಂಗಳೂರು: ಪ್ರಸಿದ್ಧ ಯಾತ್ರಾಸ್ಥಳವಾದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಸಂಭ್ರಮ ಮೈದುಂಬುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊವಿಡ್ ಕಾರಣದಿಂದಾಗಿ ಚಂಪಾಷಷ್ಠಿ ಉತ್ಸವ ಕಳೆಗಟ್ಟಿರಲಿಲ್ಲ. ಆದರೆ ಈ ಬಾರಿ ಹೆಚ್ಚಿನ ಜನಸಂದಣಿ ಸೇರುವ ಸಾಧ್ಯತೆಯಿದ್ದು, ದೇಗುಲ ಸಮಿತಿ ಮತ್ತು ಸ್ಥಳೀಯ ಆಡಳಿತಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ನಡುವೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವ ಬ್ಯಾನರ್ ಸುದ್ದಿಯಾಗಿದೆ. ‘ಹಿಂದೂ ಜಾಗರಣ ವೇದಿಕೆ, ಸುಬ್ರಹ್ಮಣ್ಯ ಘಟಕ’ ಹೆಸರಿನಲ್ಲಿ ಕಾಣಿಸಿಕೊಂಡಿರುವ ಈ ಬ್ಯಾನರ್ನ ಒಕ್ಕಣೆಯು ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಅಂತ್ಯಗೊಂಡಿದೆ.
ಮುಜರಾಯಿ ಇಲಾಖೆ ಸುಪರ್ದಿಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇದೇ 29ರಂದು ಚಂಪಾ ಷಷ್ಠಿ ಹಾಗೂ ಬ್ರಹ್ಮರಥೋತ್ಸವ ನಡೆಯಲಿದೆ. ದೇವಸ್ಥಾನದ ಜಾತ್ರೆಗಳಲ್ಲಿ ಮೊದಲಿನಿಂದಲೂ ಜಾತಿ ಮತ್ತು ಧರ್ಮ ಭೇದವಿಲ್ಲದೆ ವರ್ತಕರು ಅಂಗಡಿಗಳನ್ನು ಹಾಕಿ, ವ್ಯಾಪಾರ ಮಾಡುತ್ತಿದ್ದರು. ಆದರೆ, ಇದೀಗ ಕಾಣಿಸಿಕೊಂಡಿರುವ ಬ್ಯಾನರ್ನಲ್ಲಿ ‘ಕುಕ್ಕೆ ಸುಬ್ರಮಣ್ಯ ಚಂಪಾಷಷ್ಠಿಯ ಸಂದರ್ಭದಲ್ಲಿ ಈ ಪರಿಸರದಲ್ಲಿ ಅನ್ಯ ಮತೀಯರ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ’ ಎಂದು ಬ್ಯಾನರ್ನಲ್ಲಿ ಹೇಳಲಾಗಿದೆ. ‘ಕುಕ್ಕೆ ಸುಬ್ರಹ್ಮಣ್ಯ ಜಾತ್ರಾ ಸಂದರ್ಭದಲ್ಲಿ ಹಿಂದೂಗಳಲ್ಲದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು’ ಎಂದು ಪೊಲೀಸ್ ಠಾಣೆಗೂ ಹಿಂದೂ ಜಾಗರಣ ವೇದಿಕೆಯ ಸುಬ್ರಹ್ಮಣ್ಯ ಘಟಕದ ವತಿಯಿಂದ ದೂರು ನೀಡಲಾಗಿದೆ.