

ಚಿಕ್ಕಬಳ್ಳಾಪುರ: ನಾಯಿ ಕಡಿತಕ್ಕೊಳಗಾಗಿದ್ದ 5 ವರ್ಷದ ಬಾಲಕನಿಗೆ ಸೂಕ್ತ ಇಂಜೆಕ್ಷನ್ ನೀಡಿಲ್ಲ, ಹೀಗಾಗಿ ಮಗುವಿಗೆ ಜ್ವರ ಬಂದು ಸಾವನ್ನಪ್ಪಿದೆ ಎಂದು ಬಾಲಕನ ಪೋಷಕರು ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರಿನ ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಡೆದಿದೆ.
ಗೌರಿಬಿದನೂರು ತಾಲೂಕು ಕೋಟಾಲದಿನ್ನೆ ಗ್ರಾಮದ ಫೈರೋಜ್ ಹಾಗೂ ಫಾಮೀದಾ ದಂಪತಿಯ 5 ವರ್ಷದ ಪುತ್ರ ಸಮೀರ್ ಮೃತ ಬಾಲಕ. ಅಂದಹಾಗೆ ಕಳೆದ ಆಕ್ಟೋಬರ್ 30 ರಂದು ನಾಯಿ ಕಡಿದಿತ್ತು. ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ನಾಯಿ ಕಡಿತಕ್ಕೆ ಇಂಜೆಕ್ಷನ್ ಪಡೆದುಕೊಂಡಿದ್ದಾರೆ. ಆದರೆ ತದನಂತರ ನಾಯಿ ಕಡಿದ 5 ದಿನಗಳ ನಂತರ ಮಗುವಿಗೆ ತೀವ್ರತರ ಜ್ವರ ಬಂದಿದೆ. ಗೌರಿಬಿದನೂರು ನಗರದ ಖಾಸಗಿ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ.

ಇಂದಿರಾಗಾಂಧಿ ಆಸ್ಪತ್ರೆಯ ವೈದ್ಯರು, ನಾಯಿ ಕಡಿತಕ್ಕೆ ಸೂಕ್ತ ಇಂಜೆಕ್ಷನ್ ನೀಡಿಲ್ಲ. ಮಗುವಿನ ಮೆದುಳಿಗೆ ವಿಷ ಏರಿದೆ. ಆದ್ದರಿಂದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೋಷಕರಿಗೆ ತಿಳಿಸಿದ್ದಾರೆ. ಇದರಿಂದ ನೊಂದ ಬಾಲಕನ ಪೋಷಕರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿ, ತಮ್ಮ ಮಗುವಿಗೆ ನೀಡಿದ ಇಂಜೆಕ್ಷನ್ ಮಾಹಿತಿ ನೀಡುವಂತೆ ಕೇಳಿದ್ರೂ ಪುಸ್ತಕದಲ್ಲಿ ಬಾಲಕನಿಗೆ ನೀಡಿದ ಇಂಜೆಕ್ಷನ್ ಚಿಕಿತ್ಸೆ ಬಗ್ಗೆ ಮಾಹಿತಿಯನ್ನೇ ದಾಖಲಿಸಿಲ್ಲ.
ಇದರಿಂದ ಕೆರಳಿದ ಬಾಲಕನ ಪೋಷಕರು, ಸಂಬಂಧಿಕರು ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಟಿಎಚ್‌ಓ ರತ್ನಮ್ಮ ಪೋಷಕರ ಮನವೊಲಿಸಿ, ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.