

ಬೆಂಗಳೂರು: ಹಾಲು ದರ ಲೀಟರ್‌ಗೆ ಮೂರು ರೂಪಾಯಿ ಹೆಚ್ಚಳ ಮಾಡುವ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ತೀರ್ಮಾನವನ್ನು ತಡೆಹಿಡಿದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನ.20ರ ನಂತರ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಹಾಲು ಮತ್ತು ಮೊಸರು ದರ ಏರಿಕೆ ಘೋಷಣೆ ಹೊರಬಿದ್ದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಜತೆ ದೂರವಾಣಿ ಮೂಲಕ ಮಾತನಾಡಿ ದರ ಏರಿಕೆ ತೀರ್ಮಾನ ತಡೆಹಿಡಿಯುವಂತೆ ಸೂಚನೆ ನೀಡಿದರು. ಹೀಗಾಗಿ, ದರ ಏರಿಕೆ ಸದ್ಯಕ್ಕೆ ಮುಂದೂಡಿದಂತಾಗಿದೆ.
2020 ಫೆಬ್ರವರಿ ತಿಂಗಳಲ್ಲಿ ಲೀಟರ್‌ಗೆ ಎರಡು ರೂ. ಹೆಚ್ಚಿಸಿದ್ದು ಬಿಟ್ಟರೆ, ಇದುವರೆಗೂ ಹಾಲಿನ ದರವನ್ನು ಹೆಚ್ಚಳ ಮಾಡಿರಲಿಲ್ಲ. ಆದರೆ, ಪ್ರಸ್ತುತ ರೈತರ ಸಂಕಷ್ಟಕ್ಕೆ ಸ್ಪಂದಿಸಲು ದರ ಏರಿಸಿ ರೈತರಿಗೆ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಸದ್ಯಕ್ಕೆ ಈ ನಿರ್ಧಾರವನ್ನು ಮುಂದೂಡಲಾಗಿದೆ.
ಮುಖ್ಯಮಂತ್ರಿಯವರು ನ.20 ರ ನಂತರ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಮುಂದಿನ ಸಭೆಯಲ್ಲಿ ದರ ಪರಿಷ್ಕರಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆಎಂಎಫ್ ಆಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.