

ದುಬೈ: ಐಸಿಸಿ (ICC) ಅಧ್ಯಕ್ಷರಾಗಿ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ (Greg Barclay) ಅವರನ್ನು 2ನೇ ಅವಧಿಗೆ ಮತ್ತೊಮ್ಮೆ ಆಯ್ಕೆ ಮಾಡಲಾಗಿದೆ. ಹಾಗೆಯೇ ಬಿಸಿಸಿಐನಲ್ಲಿ 2ನೇ ಅವಧಿಗೆ ಕಾರ್ಯದರ್ಶಿಯಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಪುತ್ರ ಜಯ್ ಶಾ (Jay Shah) ಅವರಿಗೂ ಐಸಿಸಿಯಲ್ಲಿ (ICC) ದೊಡ್ಡ ಜವಾಬ್ದಾರಿ ಸಿಕ್ಕಿದೆ. ಐಸಿಸಿಯ ವಾಣಿಜ್ಯ ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾಗಿ ಅವರನ್ನು ಆಯ್ಕೆ ಮಾಡಲಾಗಿದೆ.

ಜಯ್ ಶಾ ಅವರನ್ನು ಐಸಿಸಿಯ (ICC) ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ (Financial and Commercial Affairs Committee) ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗಿದೆ. ಐಸಿಸಿ ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳೂ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದ ಐಸಿಸಿಯಲ್ಲಿ ಜಯ್ ಶಾ ಬಿಸಿಸಿಐ ಅನ್ನು ಪ್ರತಿನಿಧಿಸಲಿದ್ದಾರೆ ಅನ್ನೋದು ಖಚಿತವಾಗಿದೆ.
ವಿತ್ತ ಹುದ್ದೆಗೆ ಏಕಿಷ್ಟು ಮಹತ್ವ?
ಐಸಿಸಿ ವಾಣಿಜ್ಯ ವ್ಯವಹಾರಗಳ ಸಮಿತಿಯ ಹುದ್ದೆಗೆ ಅಧ್ಯಕ್ಷಷ್ಟೇ ಗೌರವವಿದೆ. ಏಕೆಂದರೆ ಐಸಿಸಿ ಸದಸ್ಯ ರಾಷ್ಟ್ರಗಳ ನಡುವೆ ಆದಾಯ ಹಂಚಿಕೆ ನಿರ್ಧರಿಸುತ್ತದೆ. ಐಸಿಸಿ ನಡೆಸುವ ಮಹತ್ವದ ಪ್ರಾಯೋಜಕತ್ವ ಒಪ್ಪಂದಗಳು ಈ ಸಮಿತಿ ಮೂಲಕ ನಿರ್ಧಾರವಾಗುತ್ತದೆ. ಐಸಿಸಿ ಆಯೋಜಿಸುವ ಟೂರ್ನಿಗಳಿಗೆ ಬಜೆಟ್ ಹಂಚಿಕೆ ಮಾಡುವುದೂ ಇದೇ ಸಮಿತಿ ಹಾಗಾಗಿ ಈ ಹುದ್ದೆಗೆ ಮಹತ್ವವಿದೆ.