

ತಮಿಳುನಾಡು ರಾಜ್ಯಾದ್ಯಂತ ಆರ್ಎಸ್ಎಸ್ ನಾಳೆ ಹಮ್ಮಿಕೊಳ್ಳಲು ಹೊರಟಿದ್ದ ರಸ್ತೆ ಮೆರವಣಿಗೆಗೆ ಮದ್ರಾಸ್ ಹೈಕೋರ್ಟ್ ಅನುಮತಿ ನಿರಾಕರಿಸಿದೆ. ಮೈದಾನ ಅಥವಾ ಕ್ರೀಡಾಂಗಣದಂತಹ ಕಾಂಪೌಂಡ್ ಆವರಣದಲ್ಲಿ ಮಾತ್ರ ಮೆರವಣಿಗೆ ನಡೆಸಲು ಕೋರ್ಟ್ ಸೂಚಿಸಿದ್ದು, ರಸ್ತೆ ಮೆರವಣಿಗೆಯನ್ನು ನಡೆಸುವುದಿಲ್ಲ ಎಂದು ಆರ್ಎಸ್ಎಸ್ ಹೇಳಿದೆ.
ತನ್ನ ಹೇಳಿಕೆಯಲ್ಲಿ ಹಿಂದುತ್ವವಾದಿ ಸಂಘಟನೆ “ಈ ಆದೇಶವು ಸ್ವೀಕಾರಾರ್ಹವಲ್ಲ, ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು” ಎಂದಿದೆ.
ತಮಿಳುನಾಡಿನಾದ್ಯಂತ ನವೆಂಬರ್ 6ರ ಭಾನುವಾರದಂದು 44 ಸ್ಥಳಗಳಲ್ಲಿ ಮೆರವಣಿಗೆ ನಡೆಸಲು ಮದ್ರಾಸ್ ಹೈಕೋರ್ಟ್ ಆರ್ಎಸ್ಎಸ್ಗೆ ಷರತ್ತುಬದ್ಧ ಅನುಮತಿ ನೀಡಿದೆ. ಬಲಪಂಥೀಯ ಸಂಘಟನೆಯು ಕೋರಿದ್ದ 50 ಸ್ಥಳಗಳ ಪೈಕಿ ಮೂರರಲ್ಲಿ ಮಾತ್ರ ರಾಜ್ಯ ಸರ್ಕಾರವು ಈ ಹಿಂದೆ ಮೆರವಣಿಗೆಗೆ ಅನುಮತಿ ನೀಡಿತ್ತು. ಆರ್ಎಸ್ಎಸ್, ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸಬೇಕು, ಇಲ್ಲದಿದ್ದರೆ ಪರಿಣಾಮ ಎದುರಿಸಬೇಕು ಎಂದು ಕೋರ್ಟ್ ಎಚ್ಚರಿಸಿದೆ.
ಗುಪ್ತಚರ ಮಾಹಿತಿಯ ಮೇರೆಗೆ ಕೊಯಮತ್ತೂರು, ಪೊಲ್ಲಾಚಿ ಮತ್ತು ನಾಗರ್ಕೋಯಿಲ್ ಸೇರಿದಂತೆ ಆರು ಕೋಮು ಸೂಕ್ಷ್ಮ ಸ್ಥಳಗಳಲ್ಲಿ ಮೆರವಣಿಗೆಗೆ ನ್ಯಾಯಾಲಯ ಅನುಮತಿ ನಿರಾಕರಿಸಿತ್ತು.
ಎರಡು ತಿಂಗಳ ನಂತರ ಇತರ ಆರು ಸ್ಥಳಗಳಲ್ಲಿ ಮೆರವಣಿಗೆಗೆ ಅನುಮತಿ ಪಡೆಯಲು ಆರ್ಎಸ್ಎಸ್ಗೆ ಕೋರ್ಟ್ ಅನುಮತಿ ನೀಡಿದೆ.
ಕೊಯಮತ್ತೂರಿನಲ್ಲಿ ಇತ್ತೀಚೆಗೆ ದೀಪಾವಳಿಯ ಒಂದು ದಿನದ ಮೊದಲು ಕಾರ್ ಸ್ಫೋಟ ನಡೆದಿತ್ತು. ಇದರಲ್ಲಿ ಜಮೀಶಾ ಮುಬಿನ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದರು. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ.