

ದಾವಣಗೆರೆ: ಹೊನ್ನಾಳಿ(Honnalli) ಶಾಸಕ ಎಂಪಿ ರೇಣುಕಾಚಾರ್ಯ(MP Renukacharya) ಸಹೋದರನ ಪುತ್ರನ ಕಾರು ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ(Tungabhadra Canal) 5 ದಿನಗಳ ಬಳಿಕ ಪತ್ತೆಯಾಗಿದೆ.

ಚಂದ್ರಶೇಖರ್ ಅವರ ಕ್ರೇಟಾ ಕಾರು ಸೊರಟೂರು ಬಳಿ ಇರುವ ತುಂಗಾಭದ್ರ ಕಾಲುವೆಯಲ್ಲಿ ಸಿಕ್ಕಿದೆ. ಹೊನ್ನಾಳಿ ಹಾಗೂ ನ್ಯಾಮತಿ ಮಾರ್ಗ ಮಧ್ಯೆ ಇರುವ ಕಾಲುವೆಯಲ್ಲಿ ಪತ್ತೆಯಾದ ಕಾರನ್ನು ಮೇಲಕ್ಕೆ ಎತ್ತಲಾಗಿದೆ. ಕಾರಿನಲ್ಲೇ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾರು ಪತ್ತೆಯಾದ ವಿಚಾರ ತಿಳಿದು ರೇಣುಕಾಚಾರ್ಯ ಹಾಗೂ ಕುಟುಂಬಸ್ಥರು ಸ್ಥಳಕ್ಕೆ ಬಂದಿದ್ದಾರೆ.
ಸ್ಥಳೀಯ ನಿವಾಸಿಗಳು ಕಾಲುವೆಯಲ್ಲಿ ಕಾರು ಬಿದ್ದಿದೆ ಎಂಬ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧಾರದ ಮಲೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕ್ರೇನ್ ಮೂಲಕ ಕಾರನ್ನು ಮೇಲಕ್ಕೆ ಎತ್ತಿದ್ದಾರೆ.

ಕಾರಿನ ಏರ್ ಬ್ಯಾಗ್ ತೆರೆದಿದ್ದು, ಹಿಂಭಾಗದಲ್ಲಿ ಶವ ಪತ್ತೆಯಾಗಿದೆ. ಮುಂಭಾಗದ ಗಾಜು ಒಡೆದಿದ್ದರೆ ಹಿಂಭಾಗದಲ್ಲಿ ಕಾರು ನಜ್ಜುಗುಜ್ಜಾಗಿದೆ. ಹೀಗಾಗಿ ಇದು ಅಪಘಾತವೇ ಅಥವಾ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಬಿದ್ದಿದ್ಯಾ ಈ ನಿಟ್ಟಿನಲ್ಲಿ ತನಿಖೆ ನಡೆಯಬೇಕಿದೆ.