

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್ ವಿಧಾನಸಭೆ ಚುನಾವಣೆಗೆ (Gujarat Assembly Election) ದಿನಾಂಕ ಪ್ರಕಟವಾಗಿದ್ದು, ಡಿಸೆಂಬರ್ 1 ರಂದು ಮೊದಲ ಹಂತ ಹಾಗೂ ಡಿಸೆಂಬರ್ 5ಕ್ಕೆ 2ನೇ ಹಂತದ ಮತದಾನ ನಡೆಯಲಿದೆ. ಅಲ್ಲದೇ ಡಿಸೆಂಬರ್ 8ಕ್ಕೆ ಮತ ಎಣಿಕೆ ನಡೆಯಲಿದೆ.
ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ (Election Commission) ಮುಖ್ಯ ಆಯುಕ್ತ ರಾಜೀವ್ ಕುಮಾರ್ (Rajeev Kumar), ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಗುಜರಾತ್ ವಿಧಾನಸಭೆಯ ಅವಧಿ ಮುಂದಿನ ವರ್ಷ ಫೆಬ್ರವರಿ 18ಕ್ಕೆ ಕೊನೆಗೊಳ್ಳಲಿದೆ. ಗುಜರಾತ್ ವಿಧಾನಸಭೆಯಲ್ಲಿ 182 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಹಿಮಾಚಲ ಪ್ರದೇಶದ ಜೊತೆಗೆ ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ.
ಮೊದಲ ಹಂತ
ಚುನಾವಣೆ ಅಧಿಸೂಚನೆ – ನವೆಂಬರ್ 5 ಹಾಗೂ ನಾಮಪತ್ರ ಸಲ್ಲಿಕೆಗೆ ನವೆಂಬರ್ 14 ಕೊನೆಯ ದಿನವಾಗಿದೆ. ನವೆಂಬರ್ 15ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ನವೆಂಬರ್ 17 ಕೊನೆಯ ದಿನ.
ಎರಡನೇ ಹಂತ
ಚುನಾವಣೆ ಅಧಿಸೂಚನೆ – ನವೆಂಬರ್ 10 ಹಾಗೂ ನಾಮಪತ್ರ ಸಲ್ಲಿಕೆಗೆ ನವೆಂಬರ್ 17 ಕೊನೆಯ ದಿನ. ನವೆಂಬರ್ 18ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ನವೆಂಬರ್ 21 ಕೊನೆ ದಿನ.
2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ (BJP) ಒಟ್ಟು 182 ಸ್ಥಾನಗಳ ಪೈಕಿ 99 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ (Congress) 77 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದು, ಇತರರು 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಚುನಾವಣೆಯಲ್ಲಿ ಸೋತರೂ 30 ವರ್ಷಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.