

ಭೋಪಾಲ್: ಛತ್ತೀಸ್‌ಗಡದ(Chhattisgarh) ಬಿಲಾಸ್‌ಪುರ ಜಿಲ್ಲೆಯಲ್ಲಿ ಗೋಮಾಂಸ (Beef) ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ ಬೆಲ್ಟ್‌ನಿಂದ ಥಳಿಸಿದ ಆಘಾತಕಾರಿ ಘಟನೆ ನಡೆದಿದೆ. ಈಗ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ಬಟ್ಟ ಬಿಚ್ಚಿ ಒಳ ಉಡುಪಿನಲ್ಲಿರುವ ಇಬ್ಬರು ವ್ಯಕ್ತಿಗಳನ್ನು ಜನರ ಗುಂಪು ಹಿಂಬಾಲಿಸುತ್ತಿರುವಂತೆ ಬೀದಿಯಲ್ಲಿ ಮೆರವಣಿಗೆ ಮಾಡುವುದನ್ನು ತೋರಿಸುತ್ತದೆ. ಇತರರು ತಮ್ಮ ಫೋನ್‌ಗಳಲ್ಲಿ ಇದನ್ನು ರೆಕಾರ್ಡ್ ಮಾಡುತ್ತಿದ್ದಾರೆ. ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಆರೋಪಿಗಳಲ್ಲಿ ಒಬ್ಬನಿಗೆ ಬೆಲ್ಟ್ ನಲ್ಲಿ ಹೊಡೆಯುತ್ತಿರುವುದು ಕಾಣುತ್ತದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 33 ಕೆಜಿಗೂ ಅಧಿಕ ಗೋಮಾಂಸ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನರಸಿಂಗ್ ದಾಸ್ (50) ಮತ್ತು ರಾಮನಿವಾಸ್ ಮೆಹರ್ (52) ಅವರು ಬಿಳಿ ಗೋಣಿಚೀಲವೊಂದರಲ್ಲಿ ಏನನ್ನೊ ತುಂಬಿಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು ಎಂದು ಆರೋಪಿಸಿ ಸುಮಿತ್ ನಾಯಕ್ ಎಂಬವರು ನಿನ್ನೆ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಗೋಣಿಚೀಲದಲ್ಲಿ ಏನಿದೆ ಎಂದು ದೂರುದಾರರು ಮತ್ತು ಇತರರು ಕೇಳಿದಾಗ ಅದರಲ್ಲಿ ಗೋಮಾಂಸವಿದೆ ಎಂದು ಉತ್ತರಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ 33.5 ಕೆಜಿ ದನದ ಮಾಂಸವನ್ನು ವಶಪಡಿಸಿಕೊಂಡಿದ್ದು ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎನ್‌ಡಿಟಿವಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದು ಅವರಿಂದಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆರೋಪಿಗಳನ್ನು ವಿವಸ್ತ್ರವಾಗಿಸಿ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆಯೂ ಮಾಹಿತಿ ಇಲ್ಲ.