

ಗುಜರಾತ್‌ನ ಮೊರ್ಬಿ ನಗರದ ಮಖು ನದಿಗೆ ನಿರ್ಮಿಸಿದ್ದ ತೂಗು ಸೇತುವೆ ಕುಸಿತದಿಂದಾಗಿ ಈವರೆಗೆ 141 ಜನರು ಮೃತಪಟ್ಟಿದ್ದಾರೆ. ಹೆಚ್ಚಿನ ಮಹಿಳೆಯರು ಮತ್ತು ಮಕ್ಕಳು ಪ್ರಾಣ ತೆತ್ತಿದ್ದಕ್ಕೆ ದೇಶಾದ್ಯಂತ ಶೋಕ ವ್ಯಕ್ತವಾಗಿದೆ. ಎನ್‌ಡಿಆರ್‌ಎಫ್, ಸೇನೆ, ಎಸ್‌ಡಿಆರ್‌ಎಫ್ ಮತ್ತು ರಾಜ್ಯ ಸರ್ಕಾರದ ಐದು ತಂಡಗಳು ಶೋಧ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ. ಈ ಸಂದರ್ಭದಲ್ಲಿ 2016ರಲ್ಲಿ ಕೋಲ್ಕತ್ತಾದ ಮೇಲು ಸೇತುವೆ ಕುಸಿದಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದ ಭಾಷಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
2016ರ ಮಾರ್ಚ್ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿದುಬಿದ್ದು 27 ಜನರು ಸಾವನಪ್ಪಿದ್ದರು. ಆಗ ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, “ಇದು ಆಕ್ಟ್ ಆಫ್ ಗಾಡ್ (ದೇವರ ಕೆಲಸ) ಎಂದು ಕೆಲವರು ಹೇಳುತ್ತಾರೆ, ದೀದಿ ಇದು ಆಕ್ಟ್ ಆಫ್ ಗಾಡ್ ಅಲ್ಲ ಬದಲಿಗೆ ಆಕ್ಟ್ ಆಫ್ ಫ್ರಾಡ್ (ವಂಚನೆಯ ಕೆಲಸ) ಆಗಿದೆ. ಚುನಾವಣೆಯ ಸಂದರ್ಭದಲ್ಲಿಯೇ ಕೋಲ್ಕತ್ತಾದ ಮೇಲುಸೇತುವೆ ಕುಸಿದಿದೆ ಎಂದರೆ ನೀವು ಹೇಗೆ ಆಡಳಿತ ನಡೆಸುತ್ತಿದ್ದೀರಿ ಎಂದು ಬಂಗಾಳದ ಜನಕ್ಕೆ ದೇವರು ನೀಡಿದ ಸಂದೇಶವಾಗಿದೆ. ಇವತ್ತು ಸೇತುವೆ ಬಿದ್ದಿದೆ, ನಾಳೆ ಇಡೀ ಬಂಗಾಳ ನಾಶವಾಗುತ್ತದೆ, ಅದನ್ನು ತಪ್ಪಿಸಿ ಎಂದು ದೇವರು ನೀಡಿದ ಸಂದೇಶವಾಗಿದೆ” ಎಂದು ಹೇಳಿದ್ದರು.
ಈಗ ಚುನಾವಣೆಯ ಸಂದರ್ಭದಲ್ಲಿಯೇ ಗುಜರಾತ್‌ನಲ್ಲಿಯೂ ಸಹ ತೂಗು ಸೇತುವೆ ಬಿದ್ದಿರುವುದು ಆಕ್ಟ್ ಆಫ್ ಫ್ರಾಡ್ (ದೇವರ ಕೆಲಸ) ಅಥವಾ ಆಕ್ಟ್ ಆಫ್ ಫ್ರಾಡ್ (ನಿಮ್ಮ ಆಡಳಿತದ ವಂಚನೆಯೆ) ಆಗಿದೆಯೆ ಎಂದು ನೆಟ್ಟಿಗರು ಮೋದಿಯವರನ್ನು ಪ್ರಶ್ನಿಸಿದ್ದಾರೆ. ಟ್ವಿಟರ್‌ನಲ್ಲಿ ಆಕ್ಟ್ ಆಫ್ ಗಾಡ್ ಮತ್ತು ಆಕ್ಟ್ ಆಫ್ ಫ್ರಾಡ್ ಎಂಬ ಹ್ಯಾಷ್ ಟ್ಯಾಗ್ ಗಳು ಟ್ರೆಂಡ್ ಆಗುತ್ತಿವೆ.
ಚುನಾವಣಾ ಕಾಲದಲ್ಲಿ ಕೊಲ್ಕೊತ್ತಾದ ಮೇಲುಸೇತುವೆ ಕುಸಿದದ್ದು ಬಂಗಾಳಕ್ಕೆ ದೇವರು ಕಳಿಸಿದ್ದ ಸಂದೇಶ ಎನ್ನುವುದಾದರೆ, ಈಗ ಚುನಾವಣಾ ಕಾಲದಲ್ಲಿ ಗುಜರಾತ್ ತೂಗು ಸೇತುವೆ ಕುಸಿದಿರುವುದು ದೇವರು ಯಾರಿಗೆ ನೀಡಿರುವ ಸಂದೇಶ ನರೇಂದ್ರ ಮೋದಿಯವರೆ? ಎಂದು ಕರ್ನಾಟಕದ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ.
ಈ ಘಟನೆಯಲ್ಲಿ ರಾಜಕೀಯ ಸಲ್ಲದು: ರಾಹುಲ್ ಗಾಂಧಿ
ಮೊರ್ಬಿ ಮೇಲು ಸೇತುವೆ ಕುಸಿತ ಗುಜರಾತ್ ಸರ್ಕಾರದ ವೈಫಲ್ಯವಲ್ಲವೇ? ಪ್ರಧಾನಿ ನರೇಂದ್ರ ಮೋದಿಯವರು ಇದರ ಹೊಣೆ ಹೊರಬೇಕಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು, “ಈ ಘಟನೆಯನ್ನು ರಾಜಕೀಯಗೊಳಿಸಲು ನಾನು ಬಯಸುವುದಿಲ್ಲ. ಇಲ್ಲಿ ಹಲವಾರು ಜನ ಪ್ರಾಣ ತೆತ್ತಿದ್ದಾರೆ. ಈ ಘಟನೆಯಲ್ಲಿ ರಾಜಕೀಯ ಮಾಡಿದರೆ ಆ ಜನರಿಗೆ ಅಗೌರವ ಸೂಚಿಸಿದಂತೆ ಆಗುತ್ತದೆ. ಅದನ್ನು ನಾನು ಎಂದಿಗೂ ಮಾಡುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.