

ಕೆಲದಿನಗಳ ಹಿಂದೆ ಸಾಕಷ್ಟು ಹೈಡ್ರಾಮಕ್ಕೆ ಕಾರಣವಾಗಿದ್ದ ಸುರತ್ಕಲ್ ಟೋಲ್ ಪ್ಲಾಜಾ (Surathkal toll gate) ಗದ್ದಲ ಮತ್ತೆ ಮುನ್ನಲೆಗೆ ಬಂದಿದೆ. ಟೋಲ್ ಗೇಟ್ ತೆರವಿಗೆ ಇದೀಗ ಹಗಲು ರಾತ್ರಿಯ ಅನಿರ್ಧಾಷ್ಟಾವಧಿ ಧರಣಿ ಪ್ರಾರಂಭವಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಟೋಲ್ ಗೇಟ್ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಹೌದು.. ಮಂಗಳೂರು ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌ನಲ್ಲಿರುವ ಟೋಲ್ ಗೇಟ್ ಅಕ್ರಮ ಎಂಬುದು ಹಲವು ವರ್ಷಗಳ ಆರೋಪ. ಈ ಟೋಲ್ ಪ್ಲಾಜಾ ತೆರವಿಗೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸಮಾನಮನಸ್ಕ ಸಂಘಟನೆಗಳು ಆರು ವರ್ಷಗಳಿಂದ ಹೋರಾಟ ನಡೆಸುತ್ತಲೆ ಬಂದಿದೆ. ವಾರಗಳ ಹಿಂದಷ್ಟೇ ನಡೆದಿದ್ದ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತೆರಳಿ ಸಾಕಷ್ಟು ಹೈಡ್ರಾಮಕ್ಕೆ ಕಾರಣವಾಗಿತ್ತು. ಟೋಲ್ ಪ್ಲಾಜಾಕ್ಕೆ ಮುತ್ತಿಗೆ ಹಾಕಿದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು. ಇದೀಗ ಮತ್ತೆ ಟೋಲ್‌ಗೇಟ್ ತೆರವಿಗೆ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭವಾಗಿದೆ. ಟೋಲ್ ಪ್ಲಾಜಾದ 200 ಮೀ ದೂರದಲ್ಲಿ ಹೋರಾಟಗಾರರು ಹಗಲು ರಾತ್ರಿಯ ಧರಣಿ ಆರಂಭಿಸಿದ್ದಾರೆ. ಸಂಸದ ನಳೀನ್ ಕುಮಾರ್ ಕಟೀಲ್ ನವೆಂಬರ್ 7ರವರಗೆ ಕಾಲಾವಕಾಶ ಕೇಳಿದ್ದು ಆ ಬಳಿಕವೂ ಟೋಲ್ ಗೇಟ್ ತೆರವು ಆಗದಿದ್ದರೆ ಹೋರಾಟದ ಸ್ವರೂಪ ಬದಲಾಗುತ್ತೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌ನಲ್ಲಿ 2015ರಲ್ಲಿ ಟೋಲ್ ಪ್ಲಾಜಾ ಆರಂಭಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದ ಪ್ರಕಾರ 60 ಕಿಲೋಮೀಟರ್ ಅಂತರದಲ್ಲಿ ಟೋಲ್ ಪ್ಲಾಜಾ ಇರಬೇಕು. ಆದರೆ ಸುರತ್ಕಲ್ ಟೋಲ್‌ನಿಂದ ಉಡುಪಿಯ ಹೆಜಮಾಡಿ ಟೋಲ್ ಪ್ಲಾಜಾಕ್ಕೆ ದೂರ ಕೇವಲ 17 ಕಿ.ಮೀ. ಹೀಗಾಗಿ ಸುರತ್ಕಲ್ ಟೋಲ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮವನ್ನು ಮೀರಿದೆ ಎಂಬ ಆರೋಪ ಹೋರಾಟಗಾರರದ್ದು.
ಅಕ್ರಮವಾಗಿ ಇಲ್ಲಿ ಹಲವು ವರ್ಷಗಳಿಂದ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಹೋರಾಟಗಾರರು ಸುರತ್ಕಲ್ ಟೋಲ್‌ಗೇಟ್ ಮುಚ್ಚುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ವಾರಗಳ ಹಿಂದಿನ ಹೋರಾಟ ವಿಕೋಪಕ್ಕೆ ತಿರುಗಿದ್ದರಿಂದ ಈ ಬಾರಿ ಮುನ್ನಚ್ಚರಿಕೆ ಕ್ರಮವಾಗಿ ಟೋಲ್ ಪ್ಲಾಜಾದ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. 144 ಸೆಕ್ಷನ್ ಅನ್ವಯ ನಿಷೇಧಾಜ್ಞೆಯನ್ನು ಮಂಗಳೂರು ಕಮಿಷನರ್ ಶಶಿಕುಮಾರ್ ಜಾರಿ ಮಾಡಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹೀಗಾಗಿ 200ಮೀ ದೂರದಲ್ಲಿಯೇ ಈ ಧರಣಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಮಾಜಿ ಕಾರ್ಪೂರೇಟರ್ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ಈ ಅನಿರ್ಧಿಷ್ಟಾವಧಿ ಧರಣಿಗೆ ಕಾಂಗ್ರೆಸ್, ಡಿವೈಎಫ್ಐ, ಸಿಪಿಐಎಂ, ಎಸ್. ಡಿ. ಪಿ. ಐ ಸೇರಿ ಹತ್ತಾರು ಸಮಾನ ಮನಸ್ಕ ಸಂಘಟನೆಗಳು ಬೆಂಬಲಿಸಿದೆ. ಧರಣಿಯಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವರುಗಳು ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಸದ್ಯ ಈ ಅನಿರ್ಧಿಷ್ಟಾವಧಿ ಧರಣಿಯನ್ನು ನವೆಂಬರ್ 7ರವರೆಗೆ ಶಾಂತಿಯುತವಾಗಿ ನಡೆಸಿ ಆ ಬಳಿಕವೂ ಟೋಲ್ ಗೇಟ್ ತೆರವು ಆಗದೇ ಇದ್ದರೆ ಹೋರಾಟದ ಸ್ವರೂಪ ಬೇರೆಯಾಗಿರುತ್ತೆ ಎಂದು ಹೋರಾಟಗಾರರು ಹೇಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.