

ಮೆಲ್ಬೋರ್ನ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಹಾಗೂ ಐರ್ಲೆಂಡ್ ನಡುವಣ ಪಂದ್ಯ ರೋಚಕ ಪಲಿತಾಂಶದೊಂದಿಗೆ ಅಂತ್ಯಗೊಂಡಿದೆ. ಮಳೆ ಪೀಡಿತ ಈ ಪಂದ್ಯದಲ್ಲಿ ಡಕ್ ವರ್ತ್ ನಿಯಮದಡಿಯಲ್ಲಿ ಬಟ್ಲರ್ ಪಡೆ ಐರ್ಲೆಂಡ್ ಎದುರು 5 ರನ್ಗಳಿಂದ ಸೋಲನನುಭವಿಸಿದೆ. ಈ ಮೂಲಕ ಐರ್ಲೆಂಡ್ ಟೂರ್ನಿಯಲ್ಲಿ ತನ್ನ ಗೆಲುವಿನ ಖಾತೆ ತೆರೆದಿದೆ. ಅಲ್ಲದೆ ಟಿ20 ಕ್ರಿಕೆಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ತಂಡದ ಮೊದಲ ಗೆಲುವಾಗಿದೆ. ಈ ಪಂದ್ಯದ ಮೂಲಕ ಎರಡೂ ತಂಡಗಳು ಟಿ20ಯಲ್ಲಿ ಎರಡನೇ ಬಾರಿ ಮುಖಾಮುಖಿಯಾಗಿದ್ದು, ಇದಕ್ಕೂ ಮುನ್ನ ಆಡಿದ ಮೊದಲ ಪಂದ್ಯ ಪಲಿತಾಂಶವಿಲ್ಲದೆ ಅಂತ್ಯಗೊಂಡಿತ್ತು. ಆದರೆ ಎರಡನೇ ಟಿ20 ಪಂದ್ಯದಲ್ಲಿ ಐರ್ಲೆಂಡ್ ಗೆಲುವಿಗೆ ಮಳೆ ವರವಾಯಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ ಉತ್ತಮ ಆರಂಭ ಪಡೆಯಿತು. ತಂಡದ ಆರಂಭಿಕರಾದ ಪಾಲ್ ಸ್ಟಿರ್ಲಿಂಗ್ ಹಾಗೂ ಆಂಡ್ರ್ಯೂ ಬಾಲ್ಬಿರ್ನಿ ಮೊದಲ ವಿಕೆಟ್ ಪತನದ ವೇಳೆಗೆ ತಂಡಕ್ಕೆ 21 ರನ್ ಕೊಡುಗೆ ನೀಡಿದರು. ಹೀಗಾಗಿ ಪವರ್‌ಪ್ಲೇನಲ್ಲಿ ತಂಡ 59 ರನ್ ಗಳಿಸಿ ಭದ್ರ ಬುನಾದಿ ಹಾಕಿತು. ಆದರೆ ಎರಡನೇ ವಿಕೆಟ್ಗೆ ಜೊತೆಯಾದ ಲೋರ್ಕನ್ ಟಕರ್ ಹಾಗೂ ಬಾಲ್ಬಿರ್ನಿ ತಂಡವನ್ನು 100 ರ ಗಡಿ ದಾಟಿಸಿದರು.
ಆದರೆ ಈ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾದ ಇಂಗ್ಲೆಂಡ್ ಬೌಲರ್ಗಳು ಡೆತ್ ಓವರ್‌ಗಳಲ್ಲಿ ರನ್ ಕಟ್ಟಿಹಾಕುವುದರೊಂದಿಗೆ ವಿಕೆಟ್ಗಳ ಸುರಿಮಳೈಗೆದರು. ಹೀಗಾಗಿ 24 ಎಸೆತಗಳಲ್ಲಿ ಐರ್ಲೆಂಡ್ ತಂಡ 7 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ಐರ್ಲೆಂಡ್ ತಂಡ 19.2 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 157 ರನ್‌ಗಳಿಸಿತು. ತಂಡದ ಪರ ನಾಯಕ ಆಂಡ್ರ್ಯೂ ಬಲ್ಬಿರ್ನಿ (62) ಅರ್ಧಶತಕದೊಂದಿಗೆ ಮಿಂಚಿದರೆ, ಲೋರ್ಕನ್ ಟೇಕರ್ 34 ರನ್ ಗಳಿಸಿದರು. ಕಾಂಪರ್ ಕೂಡ 17 ರನ್ಗಳ ಕೊಡುಗೆ ನೀಡಿದರು. ಇಂಗ್ಲೆಂಡ್ ಪರ ಬೌಲಿಂಗ್ನಲ್ಲಿ ಮಿಂಚಿದ ವೇಗಿಗಳಾದ ಮಾರ್ಕ್ವುಡ್ ಮತ್ತು ಲಿಯಾಮ್ ಲಿವಿಂಗ್ಸ್ಟನ್ ತಲಾ 3 ವಿಕೆಟ್ ಪಡೆದರೆ, ಮತ್ತೊಬ್ಬ ವೇಗಿ ಸ್ಯಾಮ್ ಕರನ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್ನಲ್ಲೇ ನಾಯಕ ಬಟ್ಲರ್ ಶೂನ್ಯಕ್ಕೆ ತಮ್ಮ ವಿಕೆಟ್ ಒಪ್ಪಿಸಿದರು. ಆ ಬಳಿಕವೂ ನಿರಂತರವಾಗಿ ವಿಕೆಟ್ಗಳು ಉರುಳಿದರಿಂದ ಇಂಗ್ಲೆಂಡ್ ತಂಡ ಸಂಕಷ್ಟಕ್ಕೆ ಸಿಲುಕಿತು. ಆದರೆ ಒಂದು ಬದಿಯಲ್ಲಿ ತಂಡದ ಇನ್ನಿಂಗ್ಸ್ ಕಟ್ಟಲು ಯತ್ನಿಸಿದ ಮಲಾನ್, 37 ಎಸೆತಗಳಲ್ಲಿ 2 ಬೌಂಡರಿ ಸಹಿತ 35 ರನ್ ಗಳಿಸಿ ಔಟಾದರು. ಆ ಬಳಿಕ ಜೊತೆಯಾದ ಮೊಯಿನ್ ಅಲಿ ಹಾಗೂ ಲಿವಿಂಗ್ಸ್ಟನ್ ವೇಗವಾಗಿ ರನ್ ಗಳಿಸಲು ಮುಂದಾದರು.