

ನವದೆಹಲಿ: 1991ರ ಪೂಜಾ ಸ್ಥಳಗಳ ಕಾಯ್ದೆಯ (Places of Worship Act) ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ಕೈಗೆತ್ತಿಕೊಂಡಿದೆ. ಇದರ ಬೆನ್ನಲ್ಲೇ ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿದ್ದು, ಪೂಜಾ ಕಾಯ್ದೆಯು ಭಾರತದ ವೈವಿಧ್ಯತೆಯನ್ನು ಎತ್ತಿಹಿಡಿಯುವುದರಿಂದ ಆ ಕಾಯ್ದೆಯನ್ನು ರಕ್ಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಗೆ ಕಳುಹಿಸಿರುವ ಪತ್ರವನ್ನು ಹಂಚಿಕೊಂಡಿದ್ದಾರೆ. ಪೂಜಾ ಸ್ಥಳಗಳ ಕಾಯ್ದೆ, 1991ರ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆಯಲಾಗಿದೆ. ಸುಪ್ರೀಂ ಕೋರ್ಟ್ ಈ ಕಾಯ್ದೆಯ ಬಗ್ಗೆ ಕೇಂದ್ರ ಸರ್ಕಾರದ ನಿಲುವನ್ನು ಕೇಳಿದೆ. ಈ ಕಾಯ್ದೆ ಭಾರತದ ವೈವಿಧ್ಯತೆಯನ್ನು ಎತ್ತಿಹಿಡಿಯುವುದರಿಂದ ಪ್ರಧಾನಿ ಮೋದಿ ಈ ಕಾಯ್ದೆಯನ್ನು ರಕ್ಷಿಸಬೇಕು ಎಂದಿದ್ದಾರೆ.
ಯಾವುದೇ ಸಂಸದೀಯ ಶಾಸನದ ಸಾಂವಿಧಾನಿಕತೆಯನ್ನು ರಕ್ಷಿಸುವುದು ಕಾರ್ಯಾಂಗದ ಸಾಮಾನ್ಯ ಕರ್ತವ್ಯ ಎಂದು ಓವೈಸಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಪೂಜಾ ಸ್ಥಳಗಳ ಕಾಯ್ದೆಯ ಕುರಿತು ಮಾತನಾಡಿದ ಅವರು, ಆಗಸ್ಟ್ 15, 1947ರಂದು ಪೂಜಾ ಸ್ಥಳಗಳ ಸ್ವರೂಪವನ್ನು ರಕ್ಷಿಸಲು ಸಂಸತ್ತು ಈ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇದರ ಮುಖ್ಯ ಉದ್ದೇಶ ಭಾರತದ ವೈವಿಧ್ಯತೆ ಮತ್ತು ಬಹುತ್ವವನ್ನು ರಕ್ಷಿಸುವುದಾಗಿತ್ತು ಎಂದು ಅವರು ಹೇಳಿದ್ದಾರೆ.
ಆಧುನಿಕ ಭಾರತವು ಮಧ್ಯಕಾಲೀನ ವಿವಾದಗಳನ್ನು ಪರಿಹರಿಸುವ ಯುದ್ಧಭೂಮಿಯಾಗಲು ಸಾಧ್ಯವಿಲ್ಲ ಎಂಬುದನ್ನು ಈ ಕಾಯ್ದೆ ಪ್ರತಿನಿಧಿಸುತ್ತದೆ ಎಂದು ಒತ್ತಿ ಹೇಳಿದ್ದಾರೆ. ಇದು ಅನಗತ್ಯ ಧಾರ್ಮಿಕ ವಿವಾದಗಳನ್ನು ಕೊನೆಗೊಳಿಸುತ್ತದೆ ಮತ್ತು ಭಾರತದ ಧಾರ್ಮಿಕ ವೈವಿಧ್ಯತೆಯನ್ನು ರಕ್ಷಿಸುತ್ತದೆ. ಈ ಗಂಭೀರ ಕಾಯ್ದೆಯ ಪಾವಿತ್ರ್ಯತೆಯನ್ನು ರಕ್ಷಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ ಎಂದು ಓವೈಸಿ ಟ್ವಿಟ್ಟರ್ನಲ್ಲಿ ಬರೆದಿದ್ದಾರೆ.