

ಸುರತ್ಕಲ್: ಸುರತ್ಕಲ್ ಟೋಲ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಟೋಲ್ ವಿರೋಧಿ ಹೋರಾಟಗಾರರ ಸಮಿತಿ ಕರೆ ನೀಡಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ವೇಳೆ ಪ್ರತಿಭಟನಾಕಾರರು ಟೋಲ್ ಗೇಟ್ ಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪೊಲೀಸರು ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಟೋಲ್ ಗೇಟ್ ಮುತ್ತಿಗೆ ಸಂದರ್ಭ ಪೋಲಿಸ್ ಹಾಗೂ ಪ್ರತಿಭಟನಾಕಾರರ ನಡುವೆ ನೂಕಾಟ-ತಳ್ಳಾಟ ನಡೆದಿದ್ದು, ಈ ವೇಳೆ ಪೊಲೀಸರು ಪ್ರತಿಭಟನಾಕಾರರಿಗೆ ಲಾಠಿ ಪ್ರಯೋಗ ಮಾಡಿರುವುದಾಗಿ ಎಂದು ತಿಳಿದು ಬಂದಿದೆ.
ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಂದರ್ಭದಲ್ಲಿ ಪ್ರತಿಭಟನಾಕಾರ ಅಬ್ದುಲ್ ಖಾದರ್ ಎಂಬವರ ಕಣ್ಣಿಗೆ ಲಾಠಿ ತಾಗಿ ಗಾಯಗೊಂಡಿದ್ದು, ಅವರನ್ನು ಸುರತ್ಕಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿಭಟನೆ ವೇಳೆ ಟೋಲ್ ಕೇಂದ್ರದ ಮೇಲೆ ಹತ್ತಿ ಕಾಂಗ್ರೇಸ್ ಯುವ ಕಾರ್ಯಕರ್ತ ಮಿಥುನ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಐವನ್ ಡಿ ಸೋಜ, ವಿನಯ್ ಸೊರಕೆ, ಮುನೀರ್ ಕಾಟಿಪಳ್ಳ ಸೇರಿದಂತೆ ವೈ. ರಾಘವೇಂದ್ರ ರಾವ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಅವರೆಲ್ಲರನ್ನೂ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.