

ಪಚ್ಚನಾಡಿ, ಕಾವೂರು, ಕದ್ರಿಪದವು, ದೇರೆಬೈಲು, ತಿರುವೈಲ್, ಕುಡುಪು ಸೇರಿಸಿ 6 ವಾರ್ಡ್ ಗಳ ನಾಗರಿಕರಿಗಾಗಿ ಸರಕಾರಿ ಸೇವಾ ಸೌಲಭ್ಯಗಳ ಜನಸ್ಪಂದನಾ ಕಾರ್ಯಕ್ರಮಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ಚಾಲನೆ
1200 ರಷ್ಟು ನಾಗರಿಕರು ಭಾಗವಹಿಸಿದ, 30 ಕ್ಕೂ ಹೆಚ್ಚು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದ ಜನಸ್ಪಂದನಾ ಕಾರ್ಯಕ್ರಮ ಭಾನುವಾರ ಯಶಸ್ವಿಯಾಗಿ ನಡೆಯಿತು.

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅರ್ಹ ಫಲಾನುಭವಿಗಳಿಗೆ ವಾಹನ, ಸರಕಾರದ ಹಲವು ಯೋಜನೆಗಳ ಸಹಾಯಧನದ ಚೆಕ್ ವಿತರಣೆ, ಮನೆ ಮಂಜೂರಾತಿ ಪತ್ರ, ಹಕ್ಕುಪತ್ರ, ಅಭಾ ಕಾರ್ಡ್ ಸಹಿತ ಜನಸಾಮಾನ್ಯರಲ್ಲಿ ಮಾಹಿತಿಯ ಕೊರತೆ ಇರುವ ಸರಕಾರದ ಅನೇಕ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿಯವರ ಜನಸ್ಪಂದನಾ ಕಾರ್ಯಕ್ರಮ ಯಶಸ್ವಿಯಾಯಿತು.
ಸರಕಾರದ ಯೋಜನೆ, ಸೌಲಭ್ಯಗಳನ್ನು ಸುಲಭವಾಗಿ ಜನರಿಗೆ ತಲುಪಿಸಲು ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ನಾಗರಿಕರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೂ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ನಮ್ಮ ಕ್ಷೇತ್ರದ ಏಳು ಕಡೆ ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಆರೋಗ್ಯ ಇಲಾಖೆಯಿಂದ ಹಿಡಿದು ಕಾರ್ಮಿಕ ಇಲಾಖೆಯನ್ನು ಸೇರಿಸಿ ಕಂದಾಯ ಇಲಾಖೆಯ ತನಕ ವಿವಿಧ ಇಲಾಖೆಗಳು ಒಂದೇ ಸೂರಿನಲ್ಲಿ ಪರಿಹಾರ ನೀಡುವಂತೆ ಮಾಡಲಾಗಿದೆ. ಹಕ್ಕುಪತ್ರ, ಮಾಸಾಶನ, ಪಿಂಚಣಿ, ವಿಕಲಚೇತನ ಸವಲತ್ತು, ಕಾರ್ಮಿಕ ಕಾರ್ಡ್, ಆಯುಷ್ಮಾನ್ ಕಾರ್ಡ್, ಆಧಾರ ಕಾರ್ಡ್ ಸಹಿತ ಎಲ್ಲವೂ ಇಲ್ಲಿ ಶೀಘ್ರದಲ್ಲಿ ಮಾಡಿಕೊಡಲಾಗುತ್ತದೆ. ಯಾವುದೇ ಕಾರಣಕ್ಕೆ ಒಂದು ದಿನದಲ್ಲಿ ಪರಿಹಾರ ಆಗದ ಸಮಸ್ಯೆ ಇದ್ದರೆ ಇಲಾಖೆ ಅಧಿಕಾರಿಗಳೊಂದಿಗೆ ಕಾರಣ ಚರ್ಚಿಸಿ ವಾರದೊಳಗೆ ಮನೆ, ಕಚೇರಿಗೆ ಪ್ರಮಾಣಪತ್ರ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರಾದ ಡಾ.ಭರತ್ ಶೆಟ್ಟಿಯವರು ಹೇಳಿದ್ದಾರೆ.
ಅವರು ಪದವಿನಂಗಡಿಯ ಬೆನಕ ಸಭಾಂಗಣದಲ್ಲಿ ಪರಿಸರದ ಆರು ವಾರ್ಡ್ ಗಳನ್ನು ಒಳಗೊಂಡ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಒಂದು ವೇಳೆ ಇಲ್ಲಿರುವ ಯಾವ ಇಲಾಖೆಯಲ್ಲಿಯೂ ಸಮಸ್ಯೆಗೆ ಪರಿಹಾರ ಸಿಗದೇ ಇದ್ದಲ್ಲಿ ತಮ್ಮ ಆಪ್ತಸಹಾಯಕರ ಬಳಿ ತಿಳಿಸಿದ್ದಲ್ಲಿ ತಮ್ಮ ಶಾಸಕರ ಕಚೇರಿಯಿಂದ ಫಾಲೋ ಅಪ್ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪುಟ್ಟರಾಜು, ಮಹಾನಗರ ಪಾಲಿಕೆ ಮೇಯರ್ ಜಯಾನಂದ ಅಂಚನ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೇಮಲತಾ ರಘು ಸಾಲ್ಯಾನ್, ಪಾಲಿಕೆ ಸದಸ್ಯರಾದ ಸಂಗೀತಾ ಆರ್ ನಾಯಕ್, ಗಾಯತ್ರಿ ರಾವ್,ರಂಜಿನಿ ಕೋಟ್ಯಾನ್, ಭಾಸ್ಕರ್ ಮೊಯ್ಲಿ , ಪಕ್ಷದ ಮಂಡಲ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಪುರ, ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ, ಮಹಾಶಕ್ತಿ ಕೇಂದ್ರದ ಪ್ರಮುಖರು, ಶಕ್ತಿ ಕೇಂದ್ರ ಪ್ರಮುಖರು, ಬೂತ್ ಪ್ರಮುಖರು, ವಿವಿಧ ಇಲಾಖೆಯ ಅಧಿಕಾರಿಗಳು, ಕಾರ್ಯಕರ್ತರು ಜೊತೆಗಿದ್ದರು.