

ಕಲಬುರಗಿ: ಅಫಜಲಪುರ (Afjalpur) ತಾಲೂಕಿನ ಗಾಣಗಾಪುರದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಸನ್ನಿಧಿಯಲ್ಲಿ ಕಳೆದ ರಾತ್ರಿ ರಸ್ತೆ ಬದಿ ಮಲಗಿದ್ದ ವೃದ್ಧೆಯನ್ನು ನಾಯಿಗಳು ಕಚ್ಚಿ ತಿಂದಿವೆ. ವೃದ್ಧೆ ಮಾನಸಿಕ ಅಸ್ವಸ್ಥಳಾಗಿದ್ದು, ಸಂಬಂಧಿಕರು ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದರು. ಕಳೆದ 4 ದಿನಗಳ ಹಿಂದೆ ವೃದ್ಧೆಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದಿತ್ತು. ಇದರಿಂದ ವೃದ್ಧೆಯ ಕಾಲಿಗೆ ಗಾಯವಾಗಿದ್ದರಿಂದ ಗೂಡ್ಸ್ ವಾಹನ ಚಾಲಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಸಿದ್ದನು. ಚಾಲಕ ಚಿಕಿತ್ಸೆ ಕೊಡಸಿದ ನಂತರ ಕರೆತಂದು ರಸ್ತೆ ಬದಿ ಬಿಟ್ಟೋಗಿದ್ದನು
ಗಾಯಾಳು ವೃದ್ಧೆ ಕಳೆದ ರಾತ್ರಿ ರಸ್ತೆ ಬದಿ ಮಲಗಿದಾಗ ನಾಯಿಗಳು ವೃದ್ದೆಯನ್ನು ತಿಂದಿವೆ. ಇಂದು (ಅ.16) ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಮತ್ತು ಪೊಲೀಸರು ವೃದ್ಧೆಯ ಅಂತ್ಯಸಂಸ್ಕಾರ ಮಾಡಿದ್ದಾರೆ. ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಈ ದೃಶ್ಯ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ಎಲ್ಲಾ ರೀತಿಯ ಸೇವಾ ಕೆಲಸಗಳು, ಸಾಮಾಜಿಕ ಬದ್ಧತೆಯ ಕೆಲಸಗಳನ್ನು ಮಾಡಲು ಇಲಾಖೆಯ ನಿಯಮಗಳಲ್ಲಿ ಉಲ್ಲೇಖವಿದ್ದರೂ ಕೂಡ ಶವ ತೆರವುಗೊಳಿಸುವ ಗೋಜಿಗೆ ಯಾರೂ ಹೋಗಿಲ್ಲ. ಅಲ್ಲದೆ ಸ್ಥಳೀಯವಾಗಿಯೇ ಗ್ರಾಮ ಪಂಚಾಯಿತಿ ಇದ್ದರೂ ಕೂಡ ಗ್ರಾಪಂನವರು ಕೂಡ ಶವ ತೆರವುಗೊಳಿಸಿ ಅಂತ್ಯಸಂಸ್ಕಾರ ಮಾಡುವ ಗೋಜಿಗೆ ಹೋಗಿಲ್ಲ. ಅಲ್ಲದೆ ಪೊಲೀಸ್ ಠಾಣೆಯೂ ಗ್ರಾಮದಲ್ಲಿದೆ. ಆದರೂ ಯಾರೊಬ್ಬರು ವೃದ್ಧೆಯ ಶವದ ಕಡೆ ತಿರುಗಿ ನೋಡದೇ ಇರುವುದರಿಂದ ನಾಯಿ ನರಿಗಳು ಹರಿದು ತಿನ್ನುವಂತಾಗಿದೆ.