

ಜಾಗತಿಕ ಹಸಿವಿನ ಸೂಚ್ಯಂಕ 2022ರಲ್ಲಿ ಯುದ್ಧದಿಂದ ತೀವ್ರ ಹಾನಿಗೊಳಗಾದ ಅಫ್ಘಾನಿಸ್ತಾನವನ್ನು ಹೊರತುಪಡಿಸಿ ದಕ್ಷಿಣ ಏಷ್ಯಾದ ಎಲ್ಲಾ ದೇಶಗಳಿಗಿಂತಲೂ ಭಾರತವು ಹಿಂದೆ ಉಳಿದಿದೆ.
ನವದೆಹಲಿ: ಭಾರತವು 121 ದೇಶಗಳ ಜಾಗತಿಕ ಹಸಿವು ಸೂಚ್ಯಂಕ (GHI) 2022ರಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 6 ಸ್ಥಾನ ಕುಸಿತ ಕಂಡಿದೆ. 2021ರಲ್ಲಿ 101ನೇ ಸ್ಥಾನದಲ್ಲಿದ್ದ ಭಾರತ (India) ಈ ವರ್ಷ 107ನೇ ಸ್ಥಾನಕ್ಕೆ ಕುಸಿದಿದೆ. ಯುದ್ಧಪೀಡಿತ ದೇಶವಾದ ಅಫ್ಘಾನಿಸ್ತಾನವನ್ನು (Afghanistan) ಹೊರತುಪಡಿಸಿ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಕ್ಕಿಂತಲೂ ಭಾರತ ಹಿಂದುಳಿದಿದೆ.
ಚೀನಾ, ಟರ್ಕಿ ಮತ್ತು ಕುವೈತ್ ಸೇರಿದಂತೆ 17 ದೇಶಗಳ ಜಾಗತಿಕ ಹಸಿವು ಸೂಚ್ಯಂಕದ ಸ್ಕೋರ್ ಐದಕ್ಕಿಂತ ಕಡಿಮೆ ಇರುವ ಮೂಲಕ ಅಗ್ರ ಶ್ರೇಣಿಯನ್ನು ಪಡೆದುಕೊಂಡಿವೆ. ಈ ವರದಿಯನ್ನು ಉಲ್ಲೇಖಿಸಿದ ಕಾಂಗ್ರೆಸ್ ಸಂಸದ ಪಿ. ಚಿದಂಬರಂ, ನರೇಂದ್ರ ಮೋದಿ ನೇತೃತ್ವದ 8 ವರ್ಷಗಳ ಸರ್ಕಾರದಲ್ಲಿ 2014ರಿಂದ ನಮ್ಮ ಪರಿಸ್ಥಿತಿ ಹದಗೆಟ್ಟಿದೆ. ಅಪೌಷ್ಟಿಕತೆ, ಹಸಿವು ಮತ್ತು ಮಕ್ಕಳಲ್ಲಿ ಆರೋಗ್ಯ ಕುಂಠಿತವಾಗುವಂತಹ ಸಮಸ್ಯೆಗಳನ್ನು ಪ್ರಧಾನಿ ಮೋದಿ ಯಾವಾಗ ಪರಿಹರಿಸುತ್ತಾರೆ?” ಎಂದು ಅವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.
ಐರಿಶ್ ನೆರವು ಸಂಸ್ಥೆ ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ಜರ್ಮನ್ ಸಂಸ್ಥೆ ವೆಲ್ಟ್ ಹಂಗರ್ ಹಿಲ್ಫ್ ಜಂಟಿಯಾಗಿ ಸಿದ್ಧಪಡಿಸಿದ ವರದಿಯು ಭಾರತದಲ್ಲಿ ಹಸಿವಿನ ಮಟ್ಟವನ್ನು ಗಂಭೀರ ಎಂದು ಹೇಳಿದೆ.
2021ರಲ್ಲಿ ಭಾರತವು ಹಸಿವು ಸೂಚ್ಯಂಕದಲ್ಲಿ 116 ದೇಶಗಳಲ್ಲಿ 101ನೇ ಸ್ಥಾನದಲ್ಲಿತ್ತು. ಇದೀಗ 121 ದೇಶಗಳ ಪಟ್ಟಿಯಲ್ಲಿ 107ನೇ ಸ್ಥಾನಕ್ಕೆ ಕುಸಿದಿದೆ. ಭಾರತದ GHI ಸ್ಕೋರ್ ಕೂಡ ಕಡಿಮೆಯಾಗಿದೆ. 2000ರಲ್ಲಿ 38.8 ಇದ್ದುದು 2014 ಮತ್ತು 2022ರ ನಡುವೆ 28.2 – 29.1ರ ಶ್ರೇಣಿಗೆ ಕುಸಿದಿದೆ. ಇದನ್ನು ತಿರಸ್ಕರಿಸಿರುವ ಭಾರತ ಜಾಗತಿಕ ಹಸಿವಿನ ಸೂಚ್ಯಂಕವನ್ನು ಲೆಕ್ಕಾಚಾರ ಮಾಡಲು ಬಳಸುವ ವಿಧಾನವು ಅವೈಜ್ಞಾನಿಕವಾಗಿದೆ ಎಂದು ಹೇಳಿಕೊಂಡಿದೆ.
ಜಾಗತಿಕ ಹಸಿವಿನ ಸೂಚ್ಯಂಕ 2022 ರಲ್ಲಿ ಭಾರತವು 6 ಸ್ಥಾನಗಳನ್ನು ಕಳೆದುಕೊಂಡು 121 ದೇಶಗಳಲ್ಲಿ 107ನೇ ಸ್ಥಾನವನ್ನು ಪಡೆದುಕೊಂಡಿದೆ. ಯುದ್ಧದಿಂದ ತೀವ್ರ ಹಾನಿಗೊಳಗಾದ ಅಫ್ಘಾನಿಸ್ತಾನವನ್ನು ಹೊರತುಪಡಿಸಿ ದಕ್ಷಿಣ ಏಷ್ಯಾದ ಎಲ್ಲಾ ದೇಶಗಳಿಗಿಂತಲೂ ಭಾರತವು ಹಿಂದೆ ಉಳಿದಿದೆ.
GHI ಅಂಕಗಳು ನಾಲ್ಕು ಘಟಕ ಸೂಚಕಗಳ ಮೌಲ್ಯಗಳನ್ನು ಆಧರಿಸಿವೆ. ಅಪೌಷ್ಟಿಕತೆ, ಮಕ್ಕಳ ಬೆಳವಣಿಗೆಯ ಕುಂಠಿತ, ಮಕ್ಕಳ ಕ್ಷೀಣತೆ, ಮಕ್ಕಳ ಮರಣ. ಈ ಸೂಚಕಗಳಿಗಾಗಿ ಬಳಸಲಾದ ಡೇಟಾವನ್ನು ಯುನಿಸೆಫ್, ವಿಶ್ವ ಬ್ಯಾಂಕ್, ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಸೇರಿದಂತೆ ವಿವಿಧ ವಿಶ್ವಸಂಸ್ಥೆ ಮತ್ತು ಇತರ ಏಜೆನ್ಸಿಗಳಿಂದ ಪಡೆಯಲಾಗಿದೆ ಎಂದು ವರದಿ ಹೇಳಿದೆ
ನೆರೆಯ ಪಾಕಿಸ್ತಾನ- 99, ಶ್ರೀಲಂಕಾ- 64, ಬಾಂಗ್ಲಾದೇಶ- 84, ನೇಪಾಳ-81 ಮತ್ತು ಮಯನ್ಮಾರ್- 71ನೇ ಸ್ಥಾನವನ್ನು ಪಡೆದಿವೆ. ಈ ಎಲ್ಲಾ ದೇಶಗಳು ಭಾರತಕ್ಕಿಂತ ಮೇಲಿವೆ. ಐದಕ್ಕಿಂತ ಕಡಿಮೆ ಅಂಕಗಳೊಂದಿಗೆ 17 ದೇಶಗಳು ಒಟ್ಟಾರೆಯಾಗಿ 1 ಮತ್ತು 17ರ ನಡುವೆ ಸ್ಥಾನ ಪಡೆದಿವೆ.
ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕಿಂತ ಕೆಳಗಿರುವ ದೇಶಗಳೆಂದರೆ, ಜಾಂಬಿಯಾ, ಅಫ್ಘಾನಿಸ್ತಾನ್, ಟಿಮೋರ್-ಲೆಸ್ಟೆ, ಗಿನಿಯಾ-ಬಿಸ್ಸಾವ್, ಸಿಯೆರಾ ಲಿಯೋನ್, ಲೆಸೊಥೊ, ಲೈಬೀರಿಯಾ, ನೈಜರ್, ಹೈಟಿ, ಚಾಡ್, ಡೆಮ್. ಕಾಂಗೋ, ಮಡಗಾಸ್ಕರ್, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಯೆಮೆನ್.
ಹಾಗೇ, ಗಿನಿಯಾ, ಮೊಜಾಂಬಿಕ್, ಉಗಾಂಡಾ, ಜಿಂಬಾಬ್ವೆ, ಬುರುಂಡಿ, ಸೊಮಾಲಿಯಾ, ದಕ್ಷಿಣ ಸುಡಾನ್ ಮತ್ತು ಸಿರಿಯಾ ಸೇರಿದಂತೆ 15 ದೇಶಗಳಿಗೆ ಮಾಹಿತಿಯ ಕೊರತೆಯಿಂದಾಗಿ ಶ್ರೇಯಾಂಕಗಳನ್ನು ನಿರ್ಧರಿಸಲು ಸಾಧ್ಯವಾಗಲಿಲ್ಲ ಎಂದು ವರದಿ ಹೇಳಿದೆ.